
ಭಟ್ಕಳ: ತೆಂಗಿನಗುಂಡಿ ರಸ್ತೆ ಸಂಪೂರ್ಣ ಹಾಳಾಗಿದೆ. ಇದೇ ರಸ್ತೆಯಲ್ಲಿ ನಿತ್ಯ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಸಂಚರಿಸುತ್ತಿದ್ದಾರೆ. ತೆಂಗಿನಗುಂಡಿ ಬಂದರನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೂ ಇದೇ ಆಗಿದ್ದು ಇದನ್ನು ಸರಿಪಡಿಸಿಕೊಡುವಂತೆ ಸಚಿವ ಮಂಕಾಳ ವೈದ್ಯ ಅವರಿಗೆ ಜನರು ಮನವಿ ಮಾಡಿದರು.
ಸಚಿವರ ಭಟ್ಕಳದ ಕಾರ್ಯಾಲಯದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅಹವಾಲು ಸ್ವೀಕರಿಸಿದರು.
ಶಿರಾಲಿ ತಟ್ಟಿಹಕ್ಕಲ್ ಸ್ಮಶಾನ ಮಂಜೂರಾತಿಯ ಬಗ್ಗೆಯೂ ಅಲ್ಲಿನ ಜನರು ಮನವಿ ಸಲ್ಲಿಸಿದರು. ಆರೋಗ್ಯ, ಶಿಕ್ಷಣ ಸೇರಿದಂತೆ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಜನರು ನೆರವು ಯಾಚಿಸಿದರು.
ಅನಾರೋಗ್ಯ, ಮದುವೆ, ಮನೆ ರಿಪೇರಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವು ಕೋರಿ ಬಂದ ಅರ್ಜಿಗಳಿಗೆ ಸ್ಥಳದಲ್ಲಿಯೇ ವೈಯಕ್ತಿಕ ಧನ ಸಹಾಯ ಮಾಡಿದ ಸಚಿವರು ಸರ್ಕಾರದಿಂದಲೂ ಅಗತ್ಯ ನೆರವು ಕೊಡಿಸುವ ಭರವಸೆ ನೀಡಿದರು.
ಈ ಬಾರಿ ಸಚಿವರ ಜನಸ್ಪಂದನ ಸಭೆಯಲ್ಲಿ ಸಾವಿರಾರು ಸಂಖ್ಯೆಯ ಜನರು ಭಾಗವಹಿಸಿದ್ದು, ಸಚಿವರು ರಾತ್ರಿ 10ಗಂಟೆಯವರೆಗೂ ಸಮಸ್ಯೆಗಳನ್ನು ಸಮಾಧಾನಚಿತ್ತರಾಗಿ ಆಲಿಸಿ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರೇ ಇನ್ನೂ ಕೆಲವು ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಿಕೊಡುವ ಭರವಸೆ ನೀಡಿದರು.
ಹಲವರು ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದರೆ, ಮನೆ ನಿರ್ಮಾಣ, ವಿದ್ಯುತ್ ಸಂಪರ್ಕ, ಬಾವಿ, ಶೈಕ್ಷಣಿಕವಾಗಿ ಸಹಾಯ, ವೈಯಕ್ತಿಕ ಸಮಸ್ಯೆಗಳನ್ನು ಅಲವತ್ತುಕೊಂಡರು.
ಸಚಿವರ ಪುತ್ರಿ ಬೀನಾ ವೈದ್ಯ ಕೂಡ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ಜಟೀಲ ಸಮಸ್ಯೆಗಳನ್ನು ತಂದೆಯವರೊಂದಿಗೆ ಸಮಲೋಚನೆ ನಡೆಸಿ ಪರಿಹಾರ ಸೂಚಿಸಿದರು.
ಆಪ್ತ ಕಾರ್ಯದರ್ಶಿ ನಾಗರಾಜ ನಾಯ್ಕ, ನಾಗೇಂದ್ರ ಮೊಗೇರ, ಕಾಂಗ್ರೆಸ್ ತಾಲ್ಲೂಕಾಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಭಟ್ಕಳ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜು ನಾಯ್ಕ, ಇಮ್‌ಶಾದ್, ನಾರಾಯಣ ನಾಯ್ಕ, ಮಂಜುನಾಥ ನಾಯ್ಕ ಬೆಳಕೆ, ವೆಂಕಟ್ರಮಣ ಮೊಗೇರ, ಮಂಜಪ್ಪ ನಾಯ್ಕ ಸೇರಿದಂತೆ ಇತರ ಜನಪ್ರತಿನಿಧಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.