
ಕಾರವಾರ: 5 ವರ್ಷಗಳ ಹಿಂದೆ ರಚನೆಯಾಗಿದ್ದರೂ ಈವರೆಗೆ ಆಡಳಿತ ಮಂಡಳಿ ಹೊಂದಿಲ್ಲದ ಮಂಕಿ ಪಟ್ಟಣ ಪಂಚಾಯಿತಿಗೆ ಮೊದಲ ಚುನಾವಣೆ ನಡೆಸಲು ಸಿದ್ಧತೆ ಸಾಗಿದೆ. 20 ವಾರ್ಡುಗಳಿಗೆ ಮುಂದಿನ ಎರಡು ತಿಂಗಳೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
2020ರ ನವೆಂಬರ್‌ನಲ್ಲಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಹೊನ್ನಾವರ ತಾಲ್ಲೂಕಿನ ಮಂಕಿ ಮೇಲ್ದರ್ಜೆಗೇರಿತ್ತು. ಇದಕ್ಕೂ ಐದು ವರ್ಷದ ಮುನ್ನ (2015ರಲ್ಲಿ) ವಿಸ್ತಾರವಾಗಿದ್ದ ಮಂಕಿ ಗ್ರಾಮ ಪಂಚಾಯಿತಿಯನ್ನು ಮಂಕಿ ಗುಳೇದಕೇರಿ, ಮಂಕಿ ಎ ಹಳೇಮಠ, ಮಂಕಿ ಬಿ ಅನಂತವಾಡಿ ಮತ್ತು ಮಂಕಿ ಸಿ ಚಿತ್ತಾರ ಎಂದು ನಾಲ್ಕು ಗ್ರಾಮ ಪಂಚಾಯಿತಿಯಾಗಿ ವಿಭಜಿಸಲಾಗಿತ್ತು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ 20 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಆ.11 ರಂದು ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ.
ಹೊನ್ನಾವರ ತಹಶೀಲ್ದಾರ್ ಆಡಳಿತಾಧಿಕಾರಿಯಾಗಿರುವ ಮಂಕಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಹೊನ್ನಾವರ ತಹಶೀಲ್ದಾರ್ ನೇತೃತ್ವದಲ್ಲಿ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ 20 ವಾರ್ಡುಗಳ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೆಲ ದಿನಗಳಿಂದ ನಡೆದಿದೆ.
ಅ.30 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ನ.6ರ ವರೆಗೆ ಮತದಾರರ ಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ನ.13 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.
2011ರ ಜನಗಣತಿ ವರದಿ ಅನ್ವಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19,064 ಜನಸಂಖ್ಯೆ ಇದೆ ಎಂದು ಹೇಳಲಾಗಿತ್ತು. ಸದ್ಯ ಇಲ್ಲಿನ ಜನಸಂಖ್ಯೆ 25 ಸಾವಿರ ದಾಟಿರುವ ಅಂದಾಜಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕವೇ ಮತದಾರರ ನಿಖರ ಮಾಹಿತಿ ಲಭಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಸೂಚನೆಯಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯುವ ಮತಗಟ್ಟೆಗಳಲ್ಲಿನ ಸೌಕರ್ಯಗಳ ಬಗ್ಗೆ ಖುದ್ದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಬುಧವಾರ ಪರಿಶೀಲನೆ ಕೈಗೊಂಡಿದ್ದಾರೆ.
ಮಂಕಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಅಗತ್ಯ ಸಿದ್ಧತೆಗಳು ನಡೆದಿದ್ದು ಜಿಲ್ಲಾಧಿಕಾರಿ ಅವರು ಪರಿಶೀಲನೆ ಕೈಗೊಂಡು ಮಾರ್ಗದರ್ಶನ ನೀಡುತ್ತಿದ್ದಾರೆಕೇಶವ ಚೌಗುಲೆ ಮಂಕಿ ಪ.ಪಂ ಮುಖ್ಯಾಧಿಕಾರಿ
ಪ.ಪಂ ವ್ಯಾಪ್ತಿಗೆ ಯಾವೆಲ್ಲ ಗ್ರಾಮಗಳು
ಮಂಕಿ ಗುಳದಕೇರಿ ಮತ್ತು ಮಂಕಿ ಹಳೇಮಠ ‘ಎ’ ಗ್ರಾಮ ಪಂಚಾಯಿತಿಗಳ ಪೂರ್ತಿ ಪ್ರದೇಶಗಳು ಹಾಗೂ ಚಿತ್ತಾರ ಕಂದಾಯ ಗ್ರಾಮ ವ್ಯಾಪ್ತಿಯ ಉಪ್ಲೆ ನೀಲಗಿರಿ ವಡಗೇರಿ ಶಶಿಕೊಡ್ಲ ಮುಂಡಾರ ಹಳೆಸಂಪಾಲ ಅರ್ಲೆ ಕಂಚಿಕೊಡ್ಲ ಗಂಜಿಗೇರಿ ಚಿತ್ತಾರ ಮಜರೆಗಳು. ಅನಂತವಾಡಿ ಕಂದಾಯ ಗ್ರಾಮದ ಕಾಸಗೇರಿ ಅನಂತವಾಡಿ ಕೊಪ್ಪದಮಕ್ಕಿ ಬೆದರಕೇರಿ ಮಾವಿನಸಾಗ ಅನ್ನೆಬೀಳು ಭೂತನಜೆಡಿ ಎಳ್ಳಿಮಕ್ಕಿ ಜೆಡ್ಡಿ ಮಾವಿನಕುಳಿ ನಗರಮನೆ ಹಾಜಿಮನೆ ಶೇಡಿಮನೆ ಮತ್ತು ಮುಳಗೋಡ ಮಜರೆಗಳು ಪಟ್ಟಣ ಪಂಚಾಯಿತಿಗೆ ವ್ಯಾಪ್ತಿಗೆ ಸೇರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.