ADVERTISEMENT

UPSC :ಹಳ್ಳಿ ಶಾಲೆಯಲ್ಲಿ ಓದಿದ ‘ಮನೋಜ್’ಗೆ 213ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 30 ಮೇ 2022, 11:53 IST
Last Updated 30 ಮೇ 2022, 11:53 IST
ಮನೋಜ್
ಮನೋಜ್   

ಶಿರಸಿ: ನಗರದ ಮನೋಜ್ ರಾಮನಾಥ ಹೆಗಡೆ 2021ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ನೇಮಕಾತಿ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ 213ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಅವರು ಇದಕ್ಕೂ ಮುನ್ನ ಮೂರು ಬಾರಿ ಪರೀಕ್ಷೆ ಬರೆದಿದ್ದರು.

ಸಿದ್ದಾಪುರ ತಾಲ್ಲೂಕಿನ ಹಣಗಾರ ಗ್ರಾಮದ ರಾಮನಾಥ ಹೆಗಡೆ ಮತ್ತು ಗೀತಾ ಹೆಗಡೆಯ ದಂಪತಿಯ ಪುತ್ರ ಮನೋಜ್ 1 ರಿಂದ 6ನೇ ತರಗತಿಯಲ್ಲಿ ತಾಲ್ಲೂಕಿನ ಉಂಚಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿದ್ದರು. ತಂದೆ ಪಶು ಸಂಗೋಪನಾ ಇಲಾಖೆಯ ನಿವೃತ್ತ ನೌಕರ, ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದಾರೆ.

7 ರಿಂದ 10ನೇ ತರಗತಿವರೆಗೆ ಶಿರಸಿಯ ಲಯನ್ಸ್ ಪ್ರೌಢಶಾಲೆ, ಎಂಇ.ಎಸ್. ಪಿಯು ಕಾಲೇಜ್‍ನಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದ ಮನೋಜ್ ಧಾರವಾಡದ ಕೃಷಿ ಕಾಲೇಜ್‍ನಲ್ಲಿ ಕೃಷಿ ವಿಜ್ಞಾನದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಲೇ 2016, 2017, 2019ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. 2015ರಲ್ಲಿ ಮೊದಲ ಬಾರಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆ.ಎ.ಎಸ್. ಪರೀಕ್ಷೆಯನ್ನೂ ಬರೆದಿದ್ದರು.

ADVERTISEMENT

‘2019ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಕೇವಲ 12 ಅಂಕಗಳಿಂದ ಸಂದರ್ಶನ ಹಂತದಲ್ಲಿ ಅನುತ್ತೀರ್ಣಗೊಂಡಿದ್ದೆ. ಮುಮದಿನ ಬಾರಿ ಪರೀಕ್ಷೆ ಪಾಸು ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಆಗಲೇ ಮೂಡಿತ್ತು. ಈ ಬಾರಿ 200ರ ಆಸುಪಾಸಿನ ಸ್ಥಾನ ಪಡೆಯುವ ನಿರೀಕ್ಷೆ ಇತ್ತು’ ಎಂದು ಮನೋಜ್ ಹೇಳಿದರು.

‘ಪರೀಕ್ಷೆಗಾಗಿ ವಿಶೇಷ ಸಿದ್ಧತೆಯನ್ನೇನೂ ಮಾಡಿರಲಿಲ್ಲ. ಓದಿದ್ದಷ್ಟನ್ನು ಸರಿಯಾಗಿ ನೆನಪಿಟ್ಟುಕೊಳ್ಳುತ್ತಿದ್ದೆ. ಸಾಮಾನ್ಯ ಜ್ಞಾನದ ವಿಷಯದತ್ತ ಇದ್ದ ಆಸಕ್ತಿ ಗಮನಿಸಿದ್ದ ಚಿಕ್ಕಪ್ಪ ಡಾ.ರಾಜೇಂದ್ರ ಹೆಗಡೆ ನನಗೆ ಪ್ರೇರೇಪಿಸಿದ್ದರು. ಹೀಗಾಗಿ ಪಿಯುಸಿ ಹಂತದಿಂದ ನಾಗರಿಕ ಸೇವೆಗಳ ಪರೀಕ್ಷೆ ಪಾಸು ಮಾಡುವ ಕನಸು ಮೂಡಿತ್ತು. ಅದು ಈಗ ಕೈಗೂಡಿದ್ದು ಸಂತಸ ತಂದಿದೆ’ ಎಂದರು.

‘ಉತ್ತಮ ರ‍್ಯಾಂಕ್ ಬಂದಿದ್ದರಿಂದ ಐ.ಪಿ.ಎಸ್. ಹುದ್ದೆ ಸಿಗಬಹುದು ಎಂಬ ನಿರೀಕ್ಷೆ ಇದೆ. ದೇಶದ ಯಾವುದೇ ಭಾಗದಲ್ಲಾದರೂ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.