
ಶಿರಸಿ: ಶಕ್ತಿ ದೇವತೆಯಾದ ಶಿರಸಿಯ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವವು ಫೆ.24 ರಿಂದ ಮಾ.4ರವರೆಗೆ ವೈಭವದಿಂದ ನಡೆಯಲಿದ್ದು, 30 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಭಕ್ತರ ಸೌಕರ್ಯಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮಂಗಳವಾರ ದೇವಾಲಯದ ಸಭಾಂಗಣದಲ್ಲಿ ಜಾತ್ರೆಯ ಆಮಂತ್ರಣ ಪತ್ರಿಕೆ, ಬ್ಯಾನರ್ ಬಿಡುಗಡೆಗೊಳಿಸಿ ಮಾತನಾಡಿದ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ‘ಫೆ.24ರ ರಾತ್ರಿ 11.36 ರಿಂದ 11.45ರ ಶುಭ ಮುಹೂರ್ತದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಫೆ.25ರ ಬೆಳಿಗ್ಗೆ 7.27 ರಿಂದ ದೇವಿಯ ರಥಾರೋಹಣ ಮೆರವಣಿಗೆ ಆರಂಭವಾಗಿ, ಮಧ್ಯಾಹ್ನದ ವೇಳೆಗೆ ಬಿಡ್ಕಿಬೈಲ್‌ನ ಜಾತ್ರಾ ಪೀಠದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುವುದು. ಫೆ.26 ರಿಂದ ಮಾರ್ಚ್ 4ರ ವರೆಗೆ ವಿವಿಧ ಸೇವೆಗಳು ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 5 ರಿಂದ ರಾತ್ರಿ 10ರ ವರೆಗೆ ಹಣ್ಣುಕಾಯಿ, ಕಾಣಿಕೆ, ತುಲಾಭಾರ ಹಾಗೂ ಹರಕೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಮಾ.2 ರಂದು ವಿಶೇಷವಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಉಡಿ ಸೇವೆಗೆ ಅವಕಾಶವಿದ್ದು, ಇದಕ್ಕಾಗಿ 8 ಪ್ರತ್ಯೇಕ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಜಾತ್ರೆಯ ಅಂತಿಮ ದಿನವಾದ ಮಾ.4ರಂದು ಬೆಳಿಗ್ಗೆ 10.47 ರವರೆಗೆ ಮಾತ್ರ ಸೇವೆಗಳನ್ನು ಸ್ವೀಕರಿಸಲಾಗುವುದು’ ಎಂದು ತಿಳಿಸಿದರು.
‘ಈ ಬಾರಿಯ ಜಾತ್ರೆಯಲ್ಲಿ ಭಕ್ತರ ದರ್ಶನಕ್ಕೆ ಅನುಕೂಲವಾಗುವಂತೆ ವಿಶೇಷ ಆಕರ್ಷಣೆಯ ಗದ್ದುಗೆ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಗದ್ದುಗೆ ಮಂಟಪದ ಕಾಮಗಾರಿ ಆರಂಭವಾಗಿದ್ದು, ಬಿಡ್ಕಿ ಬಯಲಿನ ಜಾತ್ರಾ ಗದ್ದುಗೆಯ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಬಿಸಿಲಿನ ತಾಪ ತಟ್ಟದಂತೆ ವಿಶಾಲವಾದ ಪೆಂಡಾಲ್ ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗುತ್ತದೆ. ಹೊರಭಾಗದಿಂದ ಬರುವ ಭಕ್ತರಿಗಾಗಿ ಮಾರಿಕಾಂಬಾ ಕಲ್ಯಾಣ ಮಂಟಪ ಹಾಗೂ ಯಾತ್ರಿ ನಿವಾಸಗಳಲ್ಲಿ ವಸತಿ ಸೌಕರ್ಯ ಸಜ್ಜುಗೊಳಿಸಲಾಗುತ್ತಿದ್ದು, ಮಾರಿಗುಡಿ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಯುವ ಅನ್ನಸಂತರ್ಪಣೆಗಾಗಿ ಈ ಬಾರಿ ವಿಶೇಷವಾಗಿ ಅತ್ಯಾಧುನಿಕ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಅವರು ವಿವರಿಸಿದರು.
ಧರ್ಮದರ್ಶಿ ಸುಧೀರ ಹಂದ್ರಾಳ ಮಾತನಾಡಿ, ‘ಕಳೆದ ಕೆಲ ಸಮಯದಿಂದ ದೇವಸ್ಥಾನದಲ್ಲಿ ಸುಮಾರು ₹8 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಭಕ್ತರ ಅನುಕೂಲಕ್ಕಾಗಿ ಬೃಹತ್ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುಮತಿ ಕೋರಿ ನ್ಯಾಯಾಧೀಶರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ದೇವಸ್ಥಾನದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲಾಗಿದೆ. ಚಂದ್ರಶಾಲೆ ಮತ್ತು ಗಂಟೆ ಮಂಟಪಕ್ಕೆ ತಾಮ್ರದ ಹೊದಿಕೆ ಹಾಕಲಾಗಿದ್ದು, ಜಾತ್ರಾ ಪರಿಕರಗಳನ್ನು ಸುರಕ್ಷಿತವಾಗಿಡಲು ದಾಸ್ತಾನು ಕೊಠಡಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ವ್ಯವಸ್ಥಾಪಕ ಚಂದ್ರಕಾಂತ, ಬಾಬುದಾರ ಪ್ರಮುಖರಾದ ಜಗದೀಶ ಗೌಡ, ರಮೇಶ ದಬ್ಬೆ, ಬಸವರಾಜ ಚಕ್ರಸಾಲಿ ಹಾಗೂ ಇತರರಿದ್ದರು.
ಫೆ.24ರಿಂದ ಜಾತ್ರಾ ಮಹೋತ್ಸವ ಆರಂಭ ಮಾ.4ರವರೆಗೆ ನಡೆಯಲಿರುವ ಜಾತ್ರೆ 30 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
ಭಕ್ತರ ಸುರಕ್ಷತೆಗಾಗಿ ಪೊಲೀಸ್ ಆರೋಗ್ಯ ಸಾರಿಗೆ ಮತ್ತು ನಗರಸಭೆಯ ಸಹಯೋಗದೊಂದಿಗೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದ್ದು ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.ಆರ್.ಜಿ.ನಾಯ್ಕ ಮಾರಿಕಾಂಬಾ ದೇವಾಲಯದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.