ADVERTISEMENT

ಬಂಡಿಯೆಳೆದು ಉತ್ಸವ ನೆರವೇರಿಸಿದ ಭಕ್ತರು

‘ಮಾರ್ಕೆ ಪೂನವ್’ ಜಾತ್ರೆ: ಮಕ್ಕಳ ಹೊಟ್ಟೆಯ ಚರ್ಮಕ್ಕೆ ಸೂಜಿಯಿಂದ ಚುಚ್ಚುವ ಹರಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 12:18 IST
Last Updated 10 ಫೆಬ್ರುವರಿ 2020, 12:18 IST
ಕಾರವಾರ ತಾಲ್ಲೂಕಿನ ಮಾಜಾಳಿ ಗ್ರಾಮದಲ್ಲಿ ಸೋಮವಾರ ‘ಮಾರ್ಕೆ ಪೂನವ್’ ಉತ್ಸವದ ಅಂಗವಾಗಿ ನೂರಾರು ಭಕ್ತರು ಬಂಡಿಗಳನ್ನು ಎಳೆದರು.
ಕಾರವಾರ ತಾಲ್ಲೂಕಿನ ಮಾಜಾಳಿ ಗ್ರಾಮದಲ್ಲಿ ಸೋಮವಾರ ‘ಮಾರ್ಕೆ ಪೂನವ್’ ಉತ್ಸವದ ಅಂಗವಾಗಿ ನೂರಾರು ಭಕ್ತರು ಬಂಡಿಗಳನ್ನು ಎಳೆದರು.   

ಕಾರವಾರ: ತಾಲ್ಲೂಕಿನ ಮಾಜಾಳಿ ಗ್ರಾಮದ ‘ದಾಡ್’ ದೇವರು (ರಾಮನಾಥ ದೇವರು) ಮತ್ತು ‘ದೇವತಿ’ ದೇವರ ‘ಮಾರ್ಕೆ ಪೂನವ್’ ಜಾತ್ರೆಯು ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹರಕೆಯ ಪೂಜೆಗಳು, ಹಣ್ಣುಕಾಯಿ ಸಮರ್ಪಣೆ ಮಾಡಲಾಯಿತು.

ಉತ್ಸವ ಆರಂಭವಾಗುತ್ತಿದ್ದಂತೆ, ದೇವಸ್ಥಾನದ ಆವರಣದಲ್ಲಿ ಸೇರಿದ್ದ ನೂರಾರು ಭಕ್ತರು‘ದಾಡ್ ದೇವ್ ಕೀ ಜೈ’ ಎಂದು ಜಯಘೋಷ ಕೂಗುತ್ತ ಹರಕೆ ಸಲ್ಲಿಸಿದರು. ಕನಕಾಂಬರ ಹೂವಿನ ಮಾಲೆಯಿಂದ ಅಲಂಕರಿಸಿದ್ದ ಎರಡು ಬಂಡಿಗಳಿಗೆ ಭಕ್ತರು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇದೇವೇಳೆ, ದೇವಸ್ಥಾನದಎದುರು ಮಕ್ಕಳ ಹೊಟ್ಟೆಯ ಮೇಲಿನ ಚರ್ಮಕ್ಕೆ ಸೂಜಿಯಿಂದ ಚುಚ್ಚಿ ದಾರವನ್ನು ಎಳೆದು ಹರಕೆಯೊಪ್ಪಿಸಿದರು.

ADVERTISEMENT

ಭಕ್ತಿ ಪರವಶರಾದ ಅರ್ಚಕರು ಅನುಮತಿ ನೀಡುತ್ತಿದ್ದಂತೆ ಭಕ್ತರು ಬಂಡಿಗಳನ್ನು ಎಳೆದುಕೊಂಡು ದೇವತಿ ದೇವಸ್ಥಾನದ ಬಳಿಗೆ ತಂದರು. ದಾಡ್ ದೇವಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ದೂರದ ದಾರಿಯುದ್ದಕ್ಕೂ ದೇವರ ಜಯಘೋಷಗಳು ಮೊಳಗಿದವು. ಇದೇವೇಳೆ,ನೂರಾರು ಭಕ್ತರು ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಅಲ್ಲಿಗೆ ಉತ್ಸವದ ಪ್ರಮುಖ ಘಟ್ಟ ಮುಗಿದು ಭಕ್ತರು ದೇವರ ದರ್ಶನ ಪಡೆದರು.

ದಿವಜ್ ಆಚರಣೆ: ಮಹಿಳೆಯರು ‘ದಿವಜ್’ ಆಚರಿಸಿದರು. ತಲೆಯ ಮೇಲೆ ದೀಪವನ್ನು ಹೊತ್ತುಕೊಂಡು ಒಂದು ಕಿಲೋಮೀಟರ್ ದೂರ ದೇವತಿ ದೇವಸ್ಥಾನದ ಬಳಿಗೆ ಬರಿಗಾಲಿನಲ್ಲಿ ಬರುವುದು ಈ ಆಚರಣೆಯ ವಿಶೇಷವಾಗಿದೆ.ಈ ಹರಕೆ ತೀರಿಸಲು ಕಾರವಾರ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರು ಬರುತ್ತಾರೆ.

ಜಾತ್ರೆಯ ಸಂದರ್ಭದಲ್ಲಿಬಾಲಕರು ಶೇರ್ವಾನಿ, ಜುಬ್ಬಾ ಮತ್ತು ಟೋಪಿ ಧರಿಸುತ್ತಾರೆ. ಮಹಿಳೆಯರು ‘ನವಾರಿಸ್ ಸಾರಿ’ (ಒಂಬತ್ತು ಮೊಳ ಸೀರೆ) ತೊಡುವುದು ಸಂಪ್ರದಾಯವಾಗಿದೆ.

ಜೀರ್ಣೋದ್ಧಾರ:ದೇವತಿ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದು, ಹೊರ ಆವರಣವನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಬೆಟ್ಟದ ಮೇಲಿರುವ ಪುರಾತನ ದೇಗುಲದ ಅಭಿವೃದ್ಧಿ ಕಾಮಗಾರಿಯುಇನ್ನೊಂದೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.