ADVERTISEMENT

ಜಮೀನು ಗಡಿ ಗುರುತು ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:54 IST
Last Updated 30 ಸೆಪ್ಟೆಂಬರ್ 2022, 16:54 IST
ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ರೈತರು, ತಮ್ಮ ಜಮೀನಿಗೆ ಗಡಿ ಗುರುತು ಮಾಡಿಕೊಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಕಾರವಾರದಲ್ಲಿ ಶುಕ್ರವಾರ ಮನವಿ ಸಲ್ಲಿಸಿದರು
ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ರೈತರು, ತಮ್ಮ ಜಮೀನಿಗೆ ಗಡಿ ಗುರುತು ಮಾಡಿಕೊಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಕಾರವಾರದಲ್ಲಿ ಶುಕ್ರವಾರ ಮನವಿ ಸಲ್ಲಿಸಿದರು   

ಕಾರವಾರ: ‘1979ರಲ್ಲಿ ಮಂಜೂರು ಮಾಡಲಾದ ಜಮೀನಿಗೆ ಇನ್ನೂ ಗಡಿ ಗುರುತು ಮಾಡಿಕೊಟ್ಟಿಲ್ಲ. ಹೈಕೋರ್ಟ್ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ’ ಎಂದು ಆರೋಪಿಸಿ, ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ರೈತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಅರ್ಜಿದಾರರ ಪರ ವಕೀಲ ಮೇಘರಾಜ ಆರ್.ಮೇತ್ರಿ, ‘297 ಜನರಿಗೆ ತಲಾ ನಾಲ್ಕು ಎಕರೆಗಳಂತೆ ಅಂದು ಮಂಜೂರು ಮಾಡಲಾಗಿತ್ತು. ಗ್ರಾಮದ ಬ್ಲಾಕ್ ಸಂಖ್ಯೆ 79, ಅಜಮನಾಳ ಗ್ರಾಮದ ಬ್ಲಾಕ್ ಸಂಖ್ಯೆ 5, ಬ್ಲಾಕ್ ಸಂಖ್ಯೆ 20 ‘ಬ’ಗಳಲ್ಲಿ ಅರ್ಜಿದಾರರಿಗೆ ಜಮೀನು ನೀಡಲಾಗಿದೆ. ಆದರೆ, ಜಮೀನಿನಲ್ಲಿ ಗಡಿ ಗುರುತು ಮಾಡಿ ಬಂದೊಬಸ್ತ್ ಮಾಡದ ಕಾರಣ ಕೆಲವರು ಪ್ರಭಾವಿಗಳು, ತಮಗೆ ಮಂಜೂರಾಗಿದ್ದಕ್ಕಿಂತ ಹೆಚ್ಚಿನ ಜಮೀನನ್ನು ಬಳಕೆ ಮಾಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಕೆಲವರು ತಮ್ಮದಲ್ಲದ ಜಮೀನನ್ನು ಬೇರೆಯವರಿಗೆ ಮಾರಾಟವನ್ನೂ ಮಾಡಿದ್ದಾರೆ. ರೈತರಿಗೆ ಮಂಜೂರಾಗಿರುವ ಜಮೀನಿನ ಗಡಿ ಗುರುತಿಸಿದರೆ ಸಾಗುವಳಿದಾರರಿಗೆ ಉಳುಮೆ ಮಾಡಲು ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಹೈಕೋರ್ಟ್‌ ಆದೇಶ ನೀಡಿದ್ದರೂ ಪ್ರಯೋಜನವಾಗಿಲ್ಲ. ಒಟ್ಟು 14 ಮಂದಿಯ ಪರವಾಗಿ ತೀರ್ಪು ಪ್ರಕಟವಾಗಿದೆ. ಎಲ್ಲರಿಗೂ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡಬೇಕು. ಕುಟುಂಬಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

ವಕೀಲರಾದ ಸಂತೋಷ ಮಹಾಲೆ, ಸುಭಾಸ್ ವಡ್ಡರ್, ಪ್ರಮುಖರಾದ ಮಂಜುನಾಥ ಸೋನಾರ್, ಜಯಲಕ್ಷ್ಮಿ ಫಡನೀಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.