ಶಿರಸಿ: ‘ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ಅರ್ಥಹೀನ. ಕಾಂಗ್ರೆಸ್ ವಿರುದ್ಧ ಇಂಥ ಅಪಪ್ರಚಾರದ ಬುದ್ಧಿಯನ್ನು ಬಿಜೆಪಿಯವರು ಬಿಡಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ಸಾಧನೆಗಳ ವಸ್ತು ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಅವಕಾಶ ಸಿಕ್ಕಾಗ ಕೆಲಸ ಮಾಡದ ಬಿಜೆಪಿ ಈಗ ಅಭಿವೃದ್ಧಿ ಆಗುತ್ತಿರುವುದನ್ನು ಸಹಿಸಲಾಗದೇ ಸರ್ಕಾರದ ವಿರುದ್ಧ ಅಪಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸರ್ಕಾರದಿಂದ ಬಂದಿರುವ ಅನುದಾನದ ಪಟ್ಟಿಯನ್ನೂ ಬಹಿರಂಗವಾಗಿ ಫಲಕ ಅಳವಡಿಸಿದ್ದು, ಬಿಜೆಪಿ ಕಾರ್ಯಕರ್ತರಿಗೆ ಇರಿಸು ಮುರಿಸು ಉಂಟಾಗಿದೆ. ವಿರೋಧ ಪಕ್ಷವಾಗಿ ನಮಗೆ ಸಲಹೆ ಸೂಚನೆ ನೀಡಿ. ಕಾಮಗಾರಿ ಸರಿಯಾಗದಿದ್ದರೆ ನಮಗೆ ತಿಳಿಸಿ. ಅದು ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಅಪಪ್ರಚಾರ ಮಾಡುವುದನ್ನು ಕೈ ಬಿಡಿ’ ಎಂದರು.
‘ಪ್ರತಿ ಹಳ್ಳಿಗೆ ನಾವು ಉತ್ತಮ ರಸ್ತೆ ನಿರ್ಮಿಸುತ್ತಿದ್ದೇವೆ. ಸೇತುವೆ, ಕಾಲು ಸಂಕಗಳನ್ನು ಜನತೆ ಕೇಳಿದ ಕಡೆಯಲ್ಲೆಲ್ಲ ಕೊಟ್ಟಿದ್ದೇವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಮೂಲಕ ಪ್ರತಿ ಕುಟುಂಬಕ್ಕೂ ನೆರವಾಗುತ್ತಿದ್ದೇವೆ. ಇದಾವುದೂ ಬಿಜೆಪಿಯವರಿಗೆ ಕಾಣುತ್ತಿಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ಕ್ಷೇತ್ರಕ್ಕೆ ಕಳೆದ ಎರಡು ವರ್ಷಗಳಲ್ಲಿ ₹300 ಕೋಟಿಗೂ ಅಧಿಕ ಹಣ ಬಂದಿದೆ. ಇದೆಲ್ಲ ಯಾರು ಕೊಟ್ಟರು? ಈಗ ನಮ್ಮ ಕ್ಷೇತ್ರಕ್ಕೆ ಮತ್ತೆ ₹50 ಕೋಟಿ ಮಂಜೂರಾಗಿದ್ದು, ಕ್ರಿಯಾ ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಸರ್ಕಾರದ ವಿರುದ್ಧ ವ್ರಥಾ ಆರೋಪ ಮಾಡುವ ಮೊದಲು ಬಿಜೆಪಿ ಆತ್ಮ ವಿಮರ್ಷೆ ಮಾಡಿಕೊಳ್ಳಲಿ’ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ಸುಮಾ ಉಗ್ರಾಣಕರ್, ಜ್ಯೋತಿ ಪಾಟೀಲ, ಶೈಲೇಶ ಗಾಂಧಿ, ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ಪ್ರಭಾರ ತಹಶೀಲ್ದಾರ್ ರಮೇಶ ಹೆಗಡೆ ಇದ್ದರು.
ಕಾಂಗ್ರೆಸ್ ಸರ್ಕಾರವು ಚುನಾವಣಾಪೂರ್ವ ನುಡಿದಂತೆ ಪಂಚ ಗ್ಯಾರಂಟಿಗಳನ್ನು ನೀಡಿದ್ದು ಸಮರ್ಪಕ ಅನುಷ್ಠಾನ ಗ್ಯಾರಂಟಿ ಪ್ರಾಧಿಕಾರದ ಸದಸ್ಯರು ಹಾಗೂ ಅಧಿಕಾರಿ ವರ್ಗದ ಮೇಲಿದೆಭೀಮಣ್ಣ ನಾಯ್ಕ ಶಾಸಕ
ಕಾರ್ಯಕರ್ತರ ಅಸಮಾಧಾನ:
ಸರ್ಕಾರದ ಯೋಜನೆಗಳ ಮಾಹಿತಿ ಫಲಕಗಳಲ್ಲಿ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರ ಭಾವಚಿತ್ರ ಬಳಸದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು. ವಾರ್ತಾ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ ರಘು ಕಾನಡೆ ‘ಸರ್ಕಾರದ ಯೋಜನೆಗಳನ್ನು ಸ್ಥಳೀಯ ಶಾಸಕರು ಸಮರ್ಪಕವಾಗಿ ಕ್ಷೇತ್ರದಲ್ಲಿ ಜಾರಿಗೊಳಿಸಿರುತ್ತಾರೆ. ಇಲ್ಲಿಯ ಪ್ರತಿ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಯಾವೊಂದು ಫಲಕದಲ್ಲಿಯೂ ಅವರ ಭಾವಚಿತ್ರ ಇಲ್ಲ. ಇಂತಹ ತಪ್ಪನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಶಾಸಕ ಭೀಮಣ್ಣ ನಾಯ್ಕ ಅವರೇ ಸಮಾಧಾನಪಡಿಸಿ ವಾತಾವರಣ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.