ADVERTISEMENT

PV Web Exclusive: ಊಟದಲ್ಲೂ ಕಾಣದೇ ಬಂದೀತು ಪ್ಲಾಸ್ಟಿಕ್!

ಸಮುದ್ರದಲ್ಲಿ ಅಪಾಯಕಾರಿಮಟ್ಟದಲ್ಲಿ ಬೆಳೆಯುತ್ತಿದೆ ‘ಮೈಕ್ರೊ’, ‘ಮ್ಯಾಕ್ರೊ’ ಕಣಗಳ ಸಂಖ್ಯೆ

ಸದಾಶಿವ ಎಂ.ಎಸ್‌.
Published 13 ಅಕ್ಟೋಬರ್ 2020, 16:17 IST
Last Updated 13 ಅಕ್ಟೋಬರ್ 2020, 16:17 IST
 ಕಾರವಾರ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಅಲೆಗಳೊಂದಿಗೆ ತೇಲಿಬಂದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳು (ಸಂಗ್ರಹ ಚಿತ್ರ)
 ಕಾರವಾರ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಅಲೆಗಳೊಂದಿಗೆ ತೇಲಿಬಂದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳು (ಸಂಗ್ರಹ ಚಿತ್ರ)   

ಕಾರವಾರ: ಕಳೆದ ಐದು ವರ್ಷಗಳಲ್ಲಿ ವಿಶ್ಯದಾದ್ಯಂತ ಪ್ಲಾಸ್ಟಿಕ್ ಉತ್ಪಾದನೆಯು 60 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಏರಿಕೆಯಾಗಿದೆ...!

ಗೋವಾದ ಪಣಜಿಯಲ್ಲಿರುವ ರಾಷ್ಟ್ರೀಯ ಸಮುದ್ರ ವಿಜ್ಞಾನ ಸಂಸ್ಥೆಯ (ಎನ್.ಐ.ಸಿ) ವಿಜ್ಞಾನಿಗಳು ಈಚೆಗೆ ವೆಬಿನಾರ್‌ನಲ್ಲಿ ಈ ರೀತಿ ಹೇಳಿದ್ದರು. ಇದು ಮೇಲ್ನೋಟಕ್ಕೆ ಅಚ್ಚರಿ ತರಿಸಿದರೂ ಪ್ರಪಂಚದಾದ್ಯಂತ ಪ್ಲಾಸ್ಟಿಕ್‌ನ ಮೇಲೆ ಇನ್ನೂ ಇರುವ ಅವಲಂಬನೆಯನ್ನು ಸಾರಿ ಹೇಳಿದೆ.

2015ರ ಸುಮಾರಿಗೆ ಪ್ರಪಂಚದಲ್ಲಿ ವರ್ಷಕ್ಕೆ 300 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು (1 ಮೆಟ್ರಿಕ್ ಟನ್ ಅಂದರೆ 10,000 ಕೆ.ಜಿ) ಪ್ಲಾಸ್ಟಿಕ್ ಉತ್ಪಾದನೆಯಿತ್ತು. ಆದರೆ, 2020ರ ವೇಳೆಗೆ ಇದು 360 ಮಿಲಿಯನ್ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ ಎಂದು ಅವರು ಅಂಕಿ ಅಂಶ ಸಹಿತ ವಿವರಿಸಿದ್ದರು. ಇದರಲ್ಲಿ ಕರಾವಳಿ ತೀರಕ್ಕೆ, ವಿಶೇಷವಾಗಿ ಸಮುದ್ರದಲ್ಲಿ ದೊರೆಯುವ ಆಹಾರದ ಬಗ್ಗೆ ಅವರು ನೀಡಿದ ಮಾಹಿತಿ ನಿಜಕ್ಕೂ ಆಘಾತಕಾರಿಯಾಗಿದೆ.

ADVERTISEMENT

ಕಣ್ಣಿಗೆ ಕಾಣುವ ದೊಡ್ಡ ಪ್ಲಾಸ್ಟಿಕ್ ತುಣಕುಗಳಿಗಿಂತಲೂ ಅತ್ಯಂತ ಸೂಕ್ಷ್ಮವಾದ (ಮೈಕ್ರೋ ಪ್ಲಾಸ್ಟಿಕ್) ಪ್ಲಾಸ್ಟಿಕ್ ಕಣಗಳು ಹೆಚ್ಚು ಅಪಾಯಕಾರಿಯಾಗಿವೆ. ಪರಿಸರದೊಂದಿಗೆ ಆಹಾರ ಸರಪಣಿಗೆ ಅವು ಸಂಚಕಾರ ತಂದಿಟ್ಟಿವೆ ಎಂದು ವಿವರಿಸಿದ್ದರು.

‘ಮೈಕ್ರೊ ಪ್ಲಾಸ್ಟಿಕ್ ಕಣಗಳು ಜಲಚರಗಳ ದೇಹದೊಳಕ್ಕೆ ಸೇರಿಕೊಳ್ಳುತ್ತವೆ. ಮೀನು, ಆಮೆ, ಏಡಿ, ಸೀಗಡಿ ಮುಂತಾದ ಜಲಚರಗಳ ದೇಹದಲ್ಲಿ ಅವು ಶೇಖರಣೆಯಾಗುತ್ತವೆ. ಕ್ರಮೇಣ ಆಹಾರ ಸರಪಣಿಯಲ್ಲಿ ಸೇರಿಕೊಂಡು ಮನುಷ್ಯರ ಆರೋಗ್ಯಕ್ಕೆ ಗಂಭೀರವಾದ ಪರಿಣಾಮ ಬೀರುತ್ತಿವೆ’ ಎಂದು ಸಂಸ್ಥೆಯ ವಿಜ್ಞಾನಿ ಮಹುವಾ ಸಾಹಾ ಪ್ರತಿಪಾದಿಸಿದ್ದರು.

‘ಐದು ಮಿಲಿಮೀಟರ್‌ಗಿಂತ ಸಣ್ಣದಾಗಿರುವ ತುಣುಕುಗಳನ್ನು ಮೈಕ್ರೊ ಕಣಗಳು ಎಂದು ಕರೆಯಲಾಗುತ್ತದೆ. ಅದಕ್ಕಿಂತ ಸ್ವಲ್ಪ ದೊಡ್ಡಾಗಿರುವ ಅಂದರೆ, ಐದು ಮಿಲಿಮೀಟರ್‌ಗಿಂತ ದೊಡ್ಡದಾಗಿರುವ ಕಣಗಳನ್ನು ಮ್ಯಾಕ್ರೋ ಕಣಗಳೆಂದು ಗುರುತಿಸಲಾಗುತ್ತದೆ. ಈ ಕಣಗಳು ಸಮುದ್ರದ ಜೀವವೈವಿಧ್ಯಕ್ಕೆ ಭಾರಿ ಸಂಚಕಾರ ತಂದೊಡ್ಡುತ್ತಿವೆ. ಅವುಗಳಲ್ಲಿ ಶೇ 50ರಷ್ಟು ಒಂದೇ ಬಾರಿ ಬಳಕೆಯ ಪ್ಲಾಸ್ಟಿಕ್ ಸೇರಿವೆ. ಶೇ 9ರಷ್ಟನ್ನು ಮಾತ್ರ ಮರುಬಳಕೆ ಮಾಡಲು ಸಾಧ್ಯವಿದೆ. ಉಳಿದ ಎಲ್ಲವೂ ಸಮುದ್ರ ದಂಡೆಗಳಲ್ಲಿ ಸಂಗ್ರಹವಾಗುತ್ತಿವೆ’ ಎಂದು ಅವರು ಹೇಳಿದ್ದರು.

ಮಾಹಿತಿಯೇ ಇಲ್ಲ!: ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜಗನ್ನಾಥ ರಾಥೋಡ್ ಕೂಡ ಈ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಾರೆ.

‘ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ಲಾಸ್ಟಿಕ್ ಉತ್ಪಾದನೆಯ ಪ್ರಮಾಣದ ಮಾಹಿತಿ ಸಿಗುತ್ತದೆ. ಆದರೆ, ಅದರಲ್ಲಿ ಎಷ್ಟು ಪ್ರಮಾಣದಲ್ಲಿ ಮರು ಬಳಕೆಯಾಗಿದೆ, ಪ್ರಸ್ತುತ ಎಷ್ಟು ಬಳಕೆಯಲ್ಲಿದೆ ಹಾಗೂ ಸೂಕ್ತ ರೀತಿಯಲ್ಲಿ ವಿಲೇವಾರಿ ಆಗಿದ್ದೆಷ್ಟು ಎಂಬ ಮಾಹಿತಿಯು ನಮ್ಮ ದೇಶದಲ್ಲಿ ಮಾತ್ರವಲ್ಲ, ಮುಂದುವರಿದ ರಾಷ್ಟ್ರಗಳಲ್ಲೂ ಇಲ್ಲ’ ಎನ್ನುತ್ತಾರೆ ಅವರು.

‘ದಿನನಿತ್ಯ ಬಳಸಿದ ಪ್ಲಾಸ್ಟಿಕ್ ಚೀಲಗಳು, ಮೀನು ಹಿಡಿಯುವ ಬಲೆಗಳು, ಪ್ಲಾಸ್ಟಿಕ್ ಬಾಟಲಿಗಳು ಹೀಗೆ ಹಲವು ಉತ್ಪನ್ನಗಳು ಬಿಸಿಲು, ಮಳೆಗೆ ಸಿಲುಕುತ್ತವೆ. ಸಮುದ್ರದಲ್ಲಿ ಅಲೆಗಳೊಂದಿಗೆ ನಿರಂತರ ಚಲನೆಯಿಂದ ಸಣ್ಣ ಸಣ್ಣ ಕಣಗಳಾಗಿ ಒಡೆಯುತ್ತವೆ. ಬಳಿಕ ಮೈಕ್ರೊ ಕಣಗಳಾಗಿ ನೀರು, ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ. ಅಲ್ಲಿಂದ ಸಸ್ಯ, ಮೀನುಗಳ ದೇಹದಲ್ಲಿ ಬೆರೆಯುತ್ತವೆ’ ಎಂದು ವಿವರಿಸುತ್ತಾರೆ.

‘ಪ್ರಪಂಚದಾದ್ಯಂತ ಪ್ರತಿವರ್ಷ 88 ಸಾವಿರಕ್ಕೂ ಅಧಿಕ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರದ ಒಡಲು ಸೇರುತ್ತದೆ. ಈ ಪಟ್ಟಿಯಲ್ಲಿ ಭಾರತವು ವಿಶ್ವದಲ್ಲೇ 12ನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ಇದೇ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯುವುದು ಮುಂದುವರಿದರೆ ಮುಂದೆ ಭಯಾನಕ ದಿನಗಳನ್ನು ಎದುರಿಸಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ 2050ರ ವೇಳೆಗೆ ಸಮುದ್ರದಲ್ಲಿ ಮೀನಿಗಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವೇ ಸಿಗಲಿದೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮನುಷ್ಯ ಸೃಷ್ಟಿಸಿದ ಪ್ಲಾಸ್ಟಿಕ್, ಮನುಷ್ಯನ ಅಂತ್ಯಕ್ಕೆ ಕಾರಣವಾಗಬಹುದು’ ಎಂದು ಕಳವಳ ವ್ಯಕ್ತಪಡಿಸುತ್ತಾರೆ.

ಪೂರಕ ಮಾಹಿತಿ: ಪಿ.ಟಿ.ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.