ADVERTISEMENT

ಸಚಿವ ಈಶ್ವರಪ್ಪ ನಡೆ ಖಂಡನಾರ್ಹ: ಸಚಿವ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 12:50 IST
Last Updated 2 ಏಪ್ರಿಲ್ 2021, 12:50 IST
ಸಚಿವ ಶಿವರಾಮ ಹೆಬ್ಬಾರ
ಸಚಿವ ಶಿವರಾಮ ಹೆಬ್ಬಾರ   

ಗೋಕರ್ಣ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ನಡೆ ಖಂಡನಾರ್ಹ. ಹಿರಿಯ ಸಚಿವರಾಗಿ ಇಂತಹ ಕ್ರಮ ಕೈಗೊಂಡಿದ್ದು ಎಲ್ಲರಿಗೂ ಮುಜುಗರ ಉಂಟುಮಾಡಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅಸಮಾಧಾನ ವ್ಯಕ್ತಪಡಿಸಿದರು.

ಗೋಕರ್ಣದ ಗಂಗೆಕೊಳ್ಳದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಬ್ಬರೂ ಹಿರಿಯರು, ಒಂದೇ ಜಿಲ್ಲೆಯವರು. ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಳ್ಳಲು ಹಲವು ದಾರಿಗಳಿದ್ದವು. ಅದನ್ನು ಬಿಟ್ಟು ಏಕಾಏಕಿ ರಾಜ್ಯಪಾಲರಿಗೆ ದೂರು ನೀಡಿದ ಕ್ರಮ ಸರಿಯಲ್ಲ. ಇದರಿಂದ ಸರ್ಕಾರದ ಗೌರವಕ್ಕೂ ಧಕ್ಕೆ ಉಂಟಾಗುತ್ತದೆ. ವಿರೋಧ ಪಕ್ಷದವರಿಗೂ ಸರ್ಕಾರದ ವಿರುದ್ಧ ಮಾತನಾಡಲು ವಿಷಯ ಸಿಕ್ಕಿದ ಹಾಗೆ ಆಗಿದೆ’ ಎಂದರು.

‘ಬೇರೆ ಬೇರೆ ಇಲಾಖೆಗಳಲ್ಲಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಪರಮೋಚ್ಛ ಅಧಿಕಾರ ಹೊಂದಿದ್ದಾರೆ. ಇದೇನೂ ಹೊಸತಲ್ಲ. ಸಾಮಾನ್ಯವಾಗಿ ಎಲ್ಲಾ ಮುಖ್ಯಮಂತ್ರಿಯವರೂ ಅನೇಕ ಸಲ ಇಂತಹ ಕ್ರಮ ಕೈಗೊಂಡ ಉದಾಹರಣೆಗಳಿವೆ. ಅದರ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವ ಅವಶ್ಯಕತೆ ಇಲ್ಲವಾಗಿತ್ತು. ಯಡಿಯೂರಪ್ಪ ಅವರು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಶ್ವರಪ್ಪ ಅವರ ಈ ಕ್ರಮಕ್ಕೆ ನಮ್ಮ ಬೆಂಬಲವಿಲ್ಲ. ಮುಖ್ಯಮಂತ್ರಿಯೇ ಪರಮೋಚ್ಛ, ಈಶ್ವರಪ್ಪ, ಬಸವರಾಜ ಯತ್ನಾಳ ಇಂಥವರಿಂದ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಹಾನಿಯಾಗುತ್ತಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.