ADVERTISEMENT

ಎರಡು ತಿಂಗಳಲ್ಲಿ ಕೆರೆಯ ಹೂಳೆತ್ತಿ: ಅಧಿಕಾರಿಗಳಿಗೆ ಸಚಿವ ಈಶ್ವರಪ್ಪ ತಾಕೀತು

ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 15:56 IST
Last Updated 30 ಜನವರಿ 2021, 15:56 IST
ಕಾರವಾರ ತಾಲ್ಲೂಕಿನ ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನಾ ಸ್ಥಳಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಸಚಿವ ಶಿವರಾಮ ಹೆಬ್ಬಾರ, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಶಾಸಕಿ ರೂಪಾಲಿ ನಾಯ್ಕ ಇದ್ದಾರೆ
ಕಾರವಾರ ತಾಲ್ಲೂಕಿನ ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನಾ ಸ್ಥಳಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಸಚಿವ ಶಿವರಾಮ ಹೆಬ್ಬಾರ, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಶಾಸಕಿ ರೂಪಾಲಿ ನಾಯ್ಕ ಇದ್ದಾರೆ   

ಕಾರವಾರ: ‘ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು. ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಲಜೀವನ ಅಭಿಯಾನದ (ಜೆ.ಜೆ.ಎಂ) ಅನುಷ್ಠಾನದ ಬಗ್ಗೆ ಸ್ಥಳೀಯ ಶಾಸಕರ ಜೊತೆಗೂ ಚರ್ಚಿಸಿ. ಕ್ಷೇತ್ರದಲ್ಲಿ ಯಾವ ಯೋಜನೆಗಳ ಅಡಿಯಲ್ಲಿ ಕೆಲಸಗಳು ಆಗುತ್ತಿವೆ ಎಂದು ಮಾಹಿತಿ ಕೊಡಿ. ಏನೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತನ್ನಿ. ಅವುಗಳನ್ನು ಚರ್ಚಿಸಿ ಬಗೆಹರಿಸಲಾಗುವುದು. ಜೆ.ಜೆ.ಎಂ ಅನುಷ್ಠಾನದ ಬಳಿಕ ಯಾವುದೇ ಹಳ್ಳಿಗೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು’ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ‘ಜೆ.ಜೆ.ಎಂ. ಅಡಿಯಲ್ಲಿ ವೈಯಕ್ತಿಕ ಬಾವಿಗಳನ್ನು ಬಳಸಿಕೊಳ್ಳಲು ಅನುಮತಿ ಕೊಡಿ’ ಎಂದು ಮನವಿ ಮಾಡಿದರು. ಈ ಬಗ್ಗೆ ಪ್ರಸ್ತಾವ ಕಳುಹಿಸುವಂತೆ ಈಶ್ವರಪ್ಪ ತಿಳಿಸಿದರು.

ADVERTISEMENT

‘ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ 42 ಕಾಮಗಾರಿಗಳನ್ನು ಗುರುತಿಸಬೇಕಿದೆ. ಅವುಗಳ ಪಟ್ಟಿಯನ್ನು ಒಂದು ವಾರದಲ್ಲಿ ಪೂರ್ಣಗೊಳಿಸಲಾಗುವುದು. ಮಂಜೂರು ಮಾಡಲಾಗಿರುವ 332 ಕೆಲಸಗಳಲ್ಲಿ 254ಕ್ಕೆ ಡಿ.ಪಿ.ಆರ್ ಪೂರ್ಣಗೊಂಡಿದ್ದು, 192ಕ್ಕೆ ಡಿ.ಪಿ.ಆರ್ ಅಂತಿಮಗೊಂಡಿದೆ. 139ಕ್ಕೆ ಟೆಂಡರ್ ಆಗಿದ್ದು, 41 ಕೆಲಸಗಳಿಗೆ ಕಾರ್ಯಾದೇಶ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳಾಭಾವ ಇದೆ ಎಂದು ಅಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕ್ಲಸ್ಟರ್ ಮಟ್ಟದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು.

ಕೋಟಿತೀರ್ಥ ಅಭಿವೃದ್ಧಿಗೆ ಸೂಚನೆ:ಗೋಕರ್ಣದ ಕೋಟಿತೀರ್ಥ ಅಭಿವೃದ್ಧಿಗೆ ₹ 1.50 ಕೋಟಿ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಜಿಲ್ಲಾ ಪಂಚಾಯಿತಿಯಲ್ಲಿ ಅನುದಾನದ ಲಭ್ಯತೆಯ ಬಗ್ಗೆ ಪರಿಶೀಲಿಸಿ. ಒಂದುವೇಳೆ ಕೊರತೆಯಿದ್ದರೆ ತಿಳಿಸಿ, ಅನುದಾನ ಬಿಡುಗಡೆ ಮಾಡಿಸಲಾಗುವುದು. ಕೂಡಲೇ ಕಾಮಗಾರಿ ಆರಂಭವಾಗಬೇಕು’ ಎಂದು ತಾಕೀತು ಮಾಡಿದರು.

ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‍ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತೆ ಪ್ರಿಯಾಂಕಾ ಮೇರಿ ಫರ್ನಾಂಡಿಸ್ ವೇದಿಕೆಯಲ್ಲಿದ್ದರು.

ಸಭೆಗೂ ಮೊದಲು ಸಚಿವರು ಕಾರವಾರ ತಾಲ್ಲೂಕಿನ ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.