ADVERTISEMENT

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಭಿಯಾನಕ್ಕೆ ಹೆಬ್ಬಾರ ಬೆಂಬಲ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 13:51 IST
Last Updated 14 ಜೂನ್ 2019, 13:51 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಯಲ್ಲಾಪುರ: ‘ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆನಿರ್ಮಿಸಬೇಕೆಂಬ ಅಭಿಯಾನ ಸಮಂಜಸವಾಗಿದೆ.ಶಾಸಕನಾಗಿ ನಾನೂ ಇದನ್ನು ಬೆಂಬಲಿಸುತ್ತೇನೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಸ್ಪತ್ರೆಯು ಜಿಲ್ಲೆಯ ಮಧ್ಯಭಾಗದಲ್ಲಿಎಲ್ಲಿಯೇ ಆಗಲಿ, ಅದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಕ್ಕೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಮಂಜೂರಿ ಹಂತದಲ್ಲಿ ರಾಜಕೀಯ ಕಾರಣಕ್ಕೆ ಇಲ್ಲಿಯೇ ನಿರ್ಮಿಸಬೇಕೆಂದು ಒತ್ತಾಯ ಮಾಡಬಾರದು. ಎಲ್ಲಾದರೂ ಆಗಲಿಅದಕ್ಕೆ ಸ್ಪಂದಿಸುವ ಮನಸ್ಥಿತಿಯಲ್ಲಿ ನಾವಿರಬೇಕು’ ಎಂದುಸಲಹೆ ನೀಡಿದರು.

‘ಬಿಪಿಎಲ್ ಕುಟುಂಬಗಳಿಗೆ ಪಡಿತರ ಪಡೆಯಲು ಕುಟುಂಬದ ಎಲ್ಲ ಸದಸ್ಯರು ಬೆರಳಚ್ಚು ನೀಡಬೇಕು ಎಂಬ ನಿಯಮ ಮಲೆನಾಡಿನಲ್ಲಿ ಕಷ್ಟಕರವಾಗಿದೆ.ಇದನ್ನು ಮಾರ್ಪಾಟು ಮಾಡಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಒಂದು ವೇಳೆ ನಿಯಮಾವಳಿಯಲ್ಲಿ ಮಾರ್ಪಾಟು ಮಾಡಿ ಗೊಂದಲವನ್ನು ನಿವಾರಣೆ ಮಾಡದೇ ಹೋದರೆ ಸಾರ್ವಜನಿಕರು, ವಿರೋಧ ಪಕ್ಷಗಳು ಹೋರಾಟ ನಡೆಸುತ್ತಾರೆ. ಇದಕ್ಕೆ ನಾನು ಕೂಡ ಆಡಳಿತ ಪಕ್ಷದ ಶಾಸಕನಾಗಿಯೂ ಮೊದಲಿಗನಾಗಿ ಹೋರಾಟಕ್ಕೆ ಬೆಂಬಲಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸಾಲಮನ್ನಾ ಯೋಜನೆಯಡಿ ಜಿಲ್ಲೆಗೆ ₹ 474 ಕೋಟಿ ಮಂಜೂರಾಗಿದೆ. ಈಗಾಗಲೇ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ₹ 235 ಕೋಟಿ ಜಮಾ ಆಗಿದೆ. ಹಂತ ಹಂತವಾಗಿ ಇನ್ನುಳಿದ ಹಣವನ್ನು ವಿತರಿಸಲಾಗುವುದು ಎಂದರು.

ದಾಂಡೇಲಿಯ ಕಾಗದ ಕಾರ್ಖಾನೆಯು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ನೀಡುತ್ತಿದೆ.ಈ ಯೋಜನೆಯನ್ನು ದಾಂಡೇಲಿ, ಹಳಿಯಾಳಕ್ಕೆ ಮಾತ್ರ ಸೀಮಿತಗೊಳಿಸಬಾರದು.ಇಡೀ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.

‘ಮತ್ತೆ ಮತ್ತೆ ಕೇಳುವುದಿಲ್ಲ’:‘ಸಚಿವ ಸ್ಥಾನದ ಆಕಾಂಕ್ಷಿಯಾದ ನಾನು ಹುದ್ದೆ ನೀಡುವಂತೆ ಸರ್ಕಾರದ ಬಳಿ ಮತ್ತೆ ಮತ್ತೆ ಕೇಳುವುದಿಲ್ಲ. ಈಗಿನ ಸಚಿವರು ಜಾಗ ಖಾಲಿ ಮಾಡಿದರೆ ಮಾತ್ರ ಉಳಿದವರಿಗೆ ಸಿಗಬೇಕಲ್ಲವೇ’ ಎಂದು ಶಿವರಾಮ ಹೆಬ್ಬಾರಪ್ರಶ್ನಿಸಿದರು.

‘ಆಡಳಿತ ಪಕ್ಷದ ಶಾಸಕನಾಗಿ ಸರ್ಕಾರ ಉಳಿಸಿಕೊಳ್ಳಲು ನಾನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಕೂಡ ಬಿಟ್ಟು ಕೊಡಲು ಸಿದ್ಧನಿದ್ದೇನೆ’ ಎಂದರು.

ಕೆಪಿಸಿಸಿ ಸದಸ್ಯ ವಿಜಯ ಮಿರಾಶಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ, ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ವಿ.ಜೋಶಿ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ, ಪ್ರಮುಖರಾದ ಶಿರೀಷ ಪ್ರಭು, ಮಂಜುನಾಥ ರಾಯ್ಕರ, ಪ್ರೇಮಾನಂದ ನಾಯ್ಕ, ಆರ್.ಎಸ್.ಭಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.