ಶಿರಸಿ: ವರದಾ ನದಿ ಪ್ರವಾಹದಲ್ಲಿ ಪ್ರತಿ ವರ್ಷ ಮುಳುಗೇಳುವ ಶಿರಸಿ ತಾಲ್ಲೂಕಿನ ಮೊಗವಳ್ಳಿ ಗ್ರಾಮದ ಸಣ್ಣಮನೆ ನಿವಾಸಿಗಳಿಗೆ ಶಾಶ್ವತ ಸ್ಥಳಾಂತರ ಬೇಡವಾಗಿದ್ದು, ತಾತ್ಕಾಲಿಕ ಸ್ಥಳಾಂತರಕ್ಕೆ ಸುತ್ತಮುತ್ತಲು ಇರುವ 'ಅರಣ್ಯಭೂಮಿ'ಯೇ ದೊಡ್ಡ ತೊಡಕಾಗಿದೆ.
ತಾಲ್ಲೂಕಿನ ಭಾಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗವಳ್ಳಿ ಗ್ರಾಮದಲ್ಲಿ ಸಣ್ಣಮನೆ ಮತ್ತು ಹೊಸ್ಕೇರಿ ಮಜಿರೆಗಳಿವೆ. ಇವುಗಳಲ್ಲಿ ಹೊಸ್ಕೇರಿ ಪ್ರದೇಶ ಎತ್ತರದ ಜಾಗದಲ್ಲಿದ್ದು, ಸುರಕ್ಷಿತವಾಗಿದೆ. ಆದರೆ ವರದಾ ಪ್ರವಾಹ ಬಂದಾಗ 170 ಕುಟುಂಬಗಳು ನೆಲೆಸಿರುವ ತಗ್ಗಿನ ಪ್ರದೇಶವಾದ ಸಣ್ಣಮನೆಯಲ್ಲಿ ಆತಂಕ ಮನೆಮಾಡುತ್ತದೆ. ಇಲ್ಲಿನ ಮನೆಗಳ ಬಾಗಿಲಿಗೆ ವರದಾ ನೀರು ಬರುತ್ತದೆ. ಪ್ರತಿ ಬಾರಿ ಪ್ರವಾಹದ ವೇಳೆ ಇಲ್ಲಿನ ನಿವಾಸಿಗಳು ತಮ್ಮ ಜಾನುವಾರುಗಳನ್ನು ಮನೆಯಲ್ಲೇ ಬಿಟ್ಟು ಹೊಸ್ಕೇರಿಯಲ್ಲಿರುವ ಕಾಳಜಿ ಕೇಂದ್ರದತ್ತ ತೆರಳುವುದು ಅನಿವಾರ್ಯ ಆಗುತ್ತದೆ. ಆದರೆ ಪ್ರವಾಹದ ವೇಳೆ ಮಾತ್ರ ತೀರಾ ಸಮಸ್ಯೆ ಅನುಭವಿಸುವ ಇಲ್ಲಿನವರನ್ನು ಬೇರೆಡೆ ಶಾಶ್ವತ ಸ್ಥಳಾಂತರಕ್ಕೂ ಒಪ್ಪುತ್ತಿಲ್ಲ.
‘ಪ್ರವಾಹದ ಸಮಯದಲ್ಲಿ ಎತ್ತರದ ಪ್ರದೇಶದಲ್ಲಿ ಉಳಿದುಕೊಳ್ಳಲು, ಅದೇ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಿ, ಉಳಿದ ಸಮಯದಲ್ಲಿ ನಾವು ಸಣ್ಣಮನೆಯಲ್ಲೇ ಇರುತ್ತೇವೆ ಎನ್ನುವುದು ಅಲ್ಲಿನ ನಿವಾಸಿಗಳ ಒತ್ತಾಯ. ಆದರೆ ಗ್ರಾಮಸ್ಥರು ಕೇಳುವ ಜಾಗ ಅರಣ್ಯ ಪ್ರದೇಶವಾಗಿದೆ. ಸಂತ್ರಸ್ತರಿಗೆ ಅರಣ್ಯ ಭೂಮಿ ನೀಡಲು ಅದರ ಬದಲಿಯಾಗಿ ಎರಡು ಪಟ್ಟು ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದರೆ ಮಾತ್ರ ಆ ಜಾಗ ಹಸ್ತಾಂತರಕ್ಕೆ ಅವಕಾಶವಿದೆ. ಆದರೆ ಅಲ್ಲಿ ಹಸ್ತಾಂತರ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಹೀಗಾಗಿ ಮನೆ ನಿರ್ಮಿಸುವ ಮೂಲಕ ತಾತ್ಕಾಲಿಕ ಸ್ಥಳಾಂತರ ಮಾಡಲು ತಾಲ್ಲೂಕು ಆಡಳಿತಕ್ಕೆ ಸಮಸ್ಯೆಯಾಗಿ ಮಾರ್ಪಟ್ಟಿದೆ.
‘ಇಲ್ಲಿನವರು ಬಹುತೇಕ ಸಣ್ಣ ಹಿಡುವಳಿದಾರರಾಗಿದ್ದು, ಕೃಷಿ ಕಾರ್ಯದ ಜತೆ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಎಲ್ಲ ರೈತರು ಸದ್ಯ ಗಾಂವಠಾಣಾ ಜಾಗದಲ್ಲಿದ್ದಾರೆ. ಸಣ್ಣಮನೆ ನಿವಾಸಿಗಳ ಕೃಷಿ ಜಮೀನು ಸಮೀಪವೇ ಇದ್ದು, ಶಾಶ್ವತವಾಗಿ ಈ ಪ್ರದೇಶದಿಂದ ಸ್ಥಳಾಂತರಗೊಳ್ಳಲು ಯಾರೂ ಒಪ್ಪುತ್ತಿಲ್ಲ. ಪ್ರಸ್ತುತ ನೆರೆ ಸಮಯದಲ್ಲಿ ಮಾತ್ರ ಬೇರೆಡೆ ವಾಸಿಸಲು ಪೂರಕವಾಗಿ ಎತ್ತರದ ಜಾಗದಲ್ಲಿ ಮನೆ ಕಟ್ಟಿಕೊಡಲು ಅವಕಾಶ ಕಲ್ಪಿಸಬೇಕು. ಈ ಹಿಂದೆ ಇದೇ ಪ್ರದೇಶದಲ್ಲಿ 50 ಎಕರೆ ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ಆ ಜಾಗದ ಬದಲಿಗೆ ಅರಣ್ಯ ಇಲಾಖೆ ವ್ಯಾಪ್ತಿಯ ಎತ್ತರದ ಪ್ರದೇಶದಲ್ಲಿ 20-25 ಎಕರೆ ಜಾಗ ನೀಡಿದರೆ ಅನುಕೂಲ ಆಗುತ್ತದೆ. ಆದರೆ ಅರಣ್ಯ ಇಲಾಖೆ ಅದಕ್ಕೆ ಒಪ್ಪುತ್ತಿಲ್ಲ’ ಎಂಬುದು ಸ್ಥಳಿಕರ ದೂರಾಗಿದೆ.
ದಾಖಲೆಗಳ ಪ್ರಕಾರ ಕಂದಾಯ ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರ ಆಗಿದೇಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಬೇಕಿದೆ. ಅರಣ್ಯ ಜಾಗವನ್ನು ಕಾನೂನು ವ್ಯಾಪ್ತಿ ಮೀರಿ ನೀಡಲು ಬರುವುದಿಲ್ಲ. ಒಂದೊಮ್ಮೆ ಹಸ್ತಾಂತರ ಆಗಿದ್ದರೆ ಇಲಾಖೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾತಾಗಿದೆ.
ಊರಿನ ಸಮೀಪವೇ ಇರುವ ಎತ್ತರದ ಅರಣ್ಯ ಪ್ರದೇಶದಲ್ಲಿ ಇಲ್ಲಿನ ಕುಟುಂಬಗಳಿಗೆ ತಲಾ 5 ಗುಂಟೆ ಜಾಗ ನೀಡಿದರೆ ಮನೆ ನಿರ್ಮಿಸಿಕೊಂಡು ಪ್ರವಾಹದ ಆತಂಕದಿಂದ ಮುಕ್ತವಾಗಲು ಸಾಧ್ಯವಿದೆ. ಈ ಬಗ್ಗೆ ಸರ್ಕಾರ ಗಮನಿಸುವ ಅಗತ್ಯವಿದೆ-ಶಂಕರ ಗೌಡ ಸ್ಥಳೀಯ ನಿವಾಸಿ
ಹಲವು ವರ್ಷಗಳ ಹಿಂದೆಯೇ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾಗಿ ಸ್ಥಳಿಕರು ಮಾಹಿತಿ ನೀಡಿದ್ದು ಆ ಜಾಗದ ಮೂಲ ದಾಖಲೆಯಲ್ಲಿ ಕಂದಾಯ ಇಲಾಖೆ ಎಂದಿದ್ದರೆ ಸ್ಥಳಾಂತರಕ್ಕೆ ಗಂಭೀರ ಪ್ರಯತ್ನ ಮಾಡಲಾಗುವುದು-ಶಿವರಾಮ ಹೆಬ್ಬಾರ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.