
ಸಿದ್ದಾಪುರ: ‘ಮಂಗನಕಾಯಿಲೆ ನಿಯಂತ್ರಣ ಒಂದು ಇಲಾಖೆ ಜವಾಬ್ದಾರಿಯಲ್ಲ. ಎಲ್ಲಾ ಇಲಾಖೆಯವರು ಇದಕ್ಕೆ ಸಹಕರಿಸಬೇಕು’ ಎಂದು ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಮಂಗನಕಾಯಿಲೆ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕೆಲವು ವರ್ಷಗಳಿಂದ ಮಂಗನಕಾಯಿಲೆ ತಾಲ್ಲೂಕಿನಲ್ಲಿ ಕಾಣಿಸುತ್ತಿದ್ದು, ಕಳೆದ ವರ್ಷ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಆದ್ದರಿಂದ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಜನರು ಅರಣ್ಯಕ್ಕೆ ಹೋಗುವುದು, ಕೃಷಿ ಚಟುವಟಿಕೆಯಲ್ಲಿ ತೊಡಗುವುದು ಸಹಜ. ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಧ್ವನಿವರ್ಧಕದ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು. ಶಿಕ್ಷಣ ಇಲಾಖೆ ಹಾಗೂ ಅಂಗನವಾಡಿಯವರು ಪಾಲಕರ ಸಭೆ ನಡೆಸಿ ಮಾಹಿತಿ ನೀಡಬೇಕು’ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ‘ಮಂಗನಕಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ.ಇದು ಉಣ್ಣೆಯಿಂದ ಹರಡುವ ಕಾಯಿಲೆ. ಡೆಲ್ಟಾ ಮೆಥ್ರಿನ್‌ನನ್ನು ಮಂಗ ಸತ್ತಿರುವ 50 ಮೀ ವ್ಯಾಪ್ತಿಯಲ್ಲಿ ಸಿಂಪಡಿಸಬೇಕು. ಪಶುಸಂಗೋಪನಾ ಇಲಾಖೆಯವರು ಈ ಔಷಧವನ್ನು ಪ್ರತಿ ಗ್ರಾಮ ಪಂಚಾಯಿತಿಗೂ ನೀಡಬೇಕು’ ಎಂದು ತಿಳಿಸಿದರು.
ಜನರಿಗೆ ಹಂಚಿಕೆ ಮಾಡಲು 36,400 ಡೇಫಾ ತೈಲದ ದಾಸ್ತಾನು ಇದೆ. 2,176 ಮನೆಗಳಿಗೆ ತೈಲ ಹಂಚಲಾಗಿದೆ. ತಾಲ್ಲೂಕಿನಲ್ಲಿ ಶಂಕಿತರ 74 ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಪಾಸಿಟಿವ್ ಪ್ರಕರಣದಲ್ಲಿ ಹಿಂದೆ ಒಂದು ತಿಂಗಳು ನಿಗಾ ವಹಿಸಲಾಗುತ್ತಿತ್ತು. ಆದರೆ ಹೊಸಮಾರ್ಗದರ್ಶಿ ಸೂತ್ರದ ಪ್ರಕಾರ ಮೂರು ತಿಂಗಳು ನಿಗಾ ವಹಿಸಬೇಕಾಗುತ್ತದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಮಂಗನಕಾಯಿಲೆ ವಾರ್ಡ್ ಮಾಡಲಾಗಿದೆ’ ಎಂದು ಹೇಳಿದರು.
ಪಶುಸಂಗೋಪನಾ ಉಪನಿರ್ದೇಶಕ ಡಾ.ವಿವೇಕಾನಂದ ಹೆಗಡೆ, ತಾಲ್ಲೂಕು ಆಸ್ಪತ್ರೆಯ ಡಾ.ಕಿರಣ, ಬಿಳಗಿ ಕೇಂದ್ರದ ಡಾ.ಕುಸುಮಾ, ಕ್ಯಾದಗಿ ಕೇಂದ್ರದ ಡಾ.ವಿರೇಂದ್ರ, ಕೊರ್ಲಕೈ ಕೇಂದ್ರದ ಡಾ.ಕಿರಣಕುಮಾರ,ಅರಣ್ಯಾಧಿಕಾರಿ ಅಜಯಕುಮಾರ, ಪ. ಪಂ ಮುಖ್ಯಾಧಿಕಾರಿ ಮಹಮ್ಮದ್ ಯಾಕೂಬ್ ಶೇಕ, ಶಿಕ್ಷಣ ಇಲಾಖೆಯ ಎಂ.ಐ.ನಾಯ್ಕ, ಸಿಡಿಪಿಒ ಪೂರ್ಣಿಮಾ ದೊಡ್ಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.