ADVERTISEMENT

ಉತ್ತರ ಕನ್ನಡ | 115 ಜನರಿಗೆ ಕೋವಿಡ್-19 ದೃಢ

ಸಾವಿರ ದಾಟಿದ ಸೋಂಕಿತರ ಒಟ್ಟು ಸಂಖ್ಯೆ: ಸೋಂಕಿನ ಮೂಲ ಪತ್ತೆಯ ಸವಾಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 14:26 IST
Last Updated 18 ಜುಲೈ 2020, 14:26 IST
   

ಕಾರವಾರ: ಜಿಲ್ಲೆಯಲ್ಲಿ ಶನಿವಾರ 115 ಜನರಿಗೆ ಕೋವಿಡ್ 19 ದೃಢಪಟ್ಟಿದ್ದು, ಒಂದೇ ದಿನ ಖಚಿತವಾದ ಅತ್ಯಧಿಕ ಸಂಖ್ಯೆ ಇದಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಒಟ್ಟು ಸಂಖ್ಯೆಯು 1,016ಕ್ಕೇರಿದೆ.

ಹೊಸದಾಗಿ ದೃಢಪಟ್ಟಿರುವ ಪ್ರಕರಣಗಳಲ್ಲಿ49 ಮಂದಿಗೆ ಸೋಂಕು ಎಲ್ಲಿಂದ ಬಂತು ಎಂಬ ಬಗ್ಗೆ ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿಲ್ಲ. ಮೂಲ ತಿಳಿಯದ ಪ್ರಕರಣಗಳನ್ನು ಪರಿಗಣಿಸಿದಾಗ ಇದು ಇಲ್ಲಿಯವರೆಗಿನ ಹೆಚ್ಚಿನ ಸಂಖ್ಯೆಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಮೂಲವೇ ತಿಳಿಯದೆ ಸೋಂಕು ದೃಢ ಪಡುತ್ತಿರುವವರ ಸಂಖ್ಯೆಯು ಕೆಲವು ದಿನಗಳಿಂದ ಹೆಚ್ಚುತ್ತಿದೆ. ಇದು ಕೊರೊನಾ ವೈರಸ್ ಹರಡುವುದನ್ನು ಸಮರ್ಪಕವಾಗಿ ತಡೆಯುವ ಕಾರ್ಯಕ್ಕೆ ಸವಾಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಶನಿವಾರ ಖಚಿತವಾದ ಪ್ರಕರಣಗಳಲ್ಲಿ 33 ಮಂದಿ ಈಗಾಗಲೇ ಸೋಂಕಿತರಾದವರ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ. 115 ಜನರಲ್ಲಿ 23 ಮಂದಿಗೆ ಜ್ವರದ ಲಕ್ಷಣಗಳು (ಐ.ಎಲ್.ಐ), ಒಬ್ಬರಿಗೆ ಉಸಿರಾಟದ ಸಮಸ್ಯೆ (ಎಸ್.ಎ.ಆರ್.ಐ) ಇದೆ. ಏಳು ಜನ ದೇಶದ ಒಳಗೆ ಪ್ರಯಾಣ ಮಾಡಿ ಜಿಲ್ಲೆಗೆ ವಾಪಸಾದವರು. ಒಬ್ಬರು ಅಂತರರಾಷ್ಟ್ರೀಯ ಪ್ರಯಾಣ ಮಾಡಿದ್ದರು ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ಸ್ಪಷ್ಟಪಡಿಸಿದೆ.

ADVERTISEMENT

ಯಾವ ತಾಲ್ಲೂಕಿನಲ್ಲಿ ಎಷ್ಟು?:ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕುಗಳಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಇದೆ. 52 ಜನರಿಗೆ ಸೋಂಕು ಇದೆ ಎಂಬುದನ್ನು ಶನಿವಾರದ ಬುಲೆಟಿನ್ ತಿಳಿಸಿದೆ. ಈ ಪೈಕಿ ದಾಂಡೇಲಿ ತಾಲ್ಲೂಕಿನಲ್ಲೇ22 ಜನರಿಗೆ ಸೋಂಕು ಕಾಣಸಿಕೊಂಡಿದೆ. ಕೆಲವು ದಿನಗಳಿಂದ ಈ ತಾಲ್ಲೂಕುಗಳಲ್ಲಿ ಹೆಚ್ಚು ಸೋಂಕಿತರು ದೃಢಪಡುತ್ತಿರುವುದು ಸ್ಥಳೀಯರಿಗೆ ಆತಂಕ ಮೂಡಿಸಿದೆ.

ಉಳಿದಂತೆ,ಕಾರವಾರ ತಾಲ್ಲೂಕಿನಲ್ಲಿ 11, ಭಟ್ಕಳ, ಮುಂಡಗೋಡ, ಕುಮಟಾ ತಾಲ್ಲೂಕುಗಳಲ್ಲಿ ತಲಾ ಒಂಬತ್ತು,ಅಂಕೋಲಾ ತಾಲ್ಲೂಕಿನಲ್ಲಿ ಎಂಟು, ಶಿರಸಿ ತಾಲ್ಲೂಕಿನಲ್ಲಿ ಏಳು, ಹೊನ್ನಾವರ ತಾಲ್ಲೂಕಿನಲ್ಲಿ ಆರು, ಸಿದ್ದಾಪುರ ತಾಲ್ಲೂಕಿನಲ್ಲಿ ಮೂವರು ಹಾಗೂಯಲ್ಲಾಪುರತಾಲ್ಲೂಕಿನಲ್ಲಿಒಬ್ಬರಿಗೆ ಕೋವಿಡ್ ಖಚಿತವಾಗಿದೆ.

24 ಮಂದಿ ಗುಣಮುಖ:ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 24 ಮಂದಿಯನ್ನು ಶನಿವಾರ ಬಿಡುಗಡೆ ಮಾಡಲಾಯಿತು. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಎಂಟು ಮಂದಿ ಸೋಂಕುಮುಕ್ತರಾಗಿ ತಮ್ಮ ಮನೆಗಳಿಗೆ ಮರಳಿದರು.ಅವರೆಲ್ಲರೂ ಕಾರವಾರ ನಗರ ಮತ್ತು ತಾಲ್ಲೂಕಿನ ವಿವಿಧ ಪ್ರದೇಶದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.