ಕಾರವಾರ: ‘ಜಗತ್ತಿನಲ್ಲಿ ಪ್ರತಿಯೊಬ್ಬರೂಇಂದು ಹಲವು ರೀತಿಯಲ್ಲಿ ಒತ್ತಡದಲ್ಲಿ ಜೀವಿಸುವಂತಾಗಿದೆ. ಇದುಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ಎಂದು ಮುಖ್ಯ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಸಿ.ರಾಜಶೇಖರ ವಿಷಾದಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕೋವಿಡ್ 19ನಿಂದಾಗಿ ಮಾನಸಿಕ ಒತ್ತಡಗಳು ಇನ್ನೂ ಹೆಚ್ಚು ಕಂಡುಬರುತ್ತಿದೆ. ಇದನ್ನು ಸ್ವಲ್ಪಮಟ್ಟಿಗಾದರೂ ಸುಧಾರಿಸುವ ಸಲುವಾಗಿ ಪ್ರತಿದಿನ ಬೆಳಿಗ್ಗೆ, ಸಂಜೆ ವಾಯುವಿಹಾರ, ವ್ಯಾಯಾಮ ಮಾಡುವುದು, ಹಾಸ್ಯ ಮನರಂಜನೆ ಕಾರ್ಯಕ್ರಮಗಳನ್ನು ನೋಡುವಂಥ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸಂತೋಷಕುಮಾರ ಶೆಟ್ಟಿ ಮಾತನಾಡಿ, ‘ಯಾರು ಕೂಡ ಎಂದಿಗೂ ಪರಿಪೂರ್ಣನಾಗಲು ಸಾಧ್ಯವಿಲ್ಲ. ಮಾನಸಿಕ ಕಾಯಿಲೆಯು ಭಯ, ಆತಂಕ, ಒತ್ತಡಗಳಿಂದ ಶುರುವಾಗುತ್ತದೆ. ಆದ್ದರಿಂದ ತಮ್ಮ ಸಮಸ್ಯೆಗಳನ್ನು ಆತ್ಮೀಯತೆಯೊಂದಿಗೆಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಬೇಕು. ತಜ್ಞರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಹೇಳಿದರು.
ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ ಮಾತನಾಡಿ, ‘ಸಮಾಜದಿಂದ ಭಯಪಟ್ಟು ತಮ್ಮ ಸಮಸ್ಯೆಗಳನ್ನು ಇತರರ ಜೊತೆ ಹಂಚಿಕೊಳ್ಳದಿರುವುದು, ನಮ್ಮ ಬಗ್ಗೆ ಕೀಳರಿಮೆಯನ್ನು ಬಿಡಬೇಕು. ಆಸೆ, ಆಂಕಾಕ್ಷೆಗಳ ಹಿತ ಮಿತವನ್ನು ಪಾಲಿಸುವುದು ಉತ್ತಮ. ಈ ಕಾಲದಲ್ಲಿ ಎಲ್ಲ ಕಾಯಿಲೆಗಳಿಗೆ ಪರಿಹಾರ ಮತ್ತು ಮದ್ದ ಇದ್ದೇ ಇದೆ’ ಎಂದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ವಿಜಯರಾಜ್ ಉಪನ್ಯಾಸ ನೀಡಿ, ‘ಮಾನಸಿಕ ಕಾಯಿಲೆಯು ಯಾವುದೇ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದು. ಕೆಲವೊಬ್ಬರಿಗೆ ತಮ್ಮ ಮಾನಸಿಕ ಸಮಸ್ಯೆ ಏನು ಎಂಬುದುರ ಅರಿವು ಇರುವುದಿಲ್ಲ. ಹೆಚ್ಚಿನ ತಲೆನೋವು, ಅತಿಯಾದ ನಿದ್ದೆ ಅಥವಾ ಅತಿ ಕಡಿಮೆ ನಿದ್ದೆ, ಯಾವುರದಲ್ಲೂ ಆಸಕ್ತಿ ಇಲ್ಲದಿರುವುದು ಕೂಡ ಮಾನಸಿಕ ಕಾಯಿಲೆಗಳ ಲಕ್ಷಣಗಳಾಗಿವೆ. ಆರಂಭದಲ್ಲೇ ಇವುಗಳನ್ನು ಗುರುತಿಸದಿದ್ದರೆ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ, ಶಿವಾಜಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ವೈದ್ಯರು, ಇಲಾಖೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.