ADVERTISEMENT

ನನಸಾಗುತ್ತಲೇ ಮರೆಯಾಗಿದ್ದ ಯೋಜನೆ

ಕುಮಟಾದಲ್ಲಿ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದ್ದ ಉದ್ಯಮಿ ಬಿ.ಆರ್.ಶೆಟ್ಟಿ

ಎಂ.ಜಿ.ನಾಯ್ಕ
Published 26 ಜುಲೈ 2022, 19:30 IST
Last Updated 26 ಜುಲೈ 2022, 19:30 IST

ಕುಮಟಾ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಬಗ್ಗೆ ಮೂರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಅಭಿಯಾನವು ನಿರ್ಣಾಯಕ ಹಂತ ತಲುಪಿ ನಂತರ ನನೆಗುದಿಗೆ ಬಿದ್ದಿತ್ತು. ಈಚೆಗೆ ಶಿರೂರು ಹೆದ್ದಾರಿ ಟೋಲ್ ನಾಕಾ ಬಳಿ ನಡೆದ ಆಂಬುಲೆನ್ಸ್ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಮಡಿದ ಬಳಿಕ ಆಗ್ರಹ ಮತ್ತೆ ಮುನ್ನೆಲೆಗೆ ಬಂದಿದೆ.

ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಶಾಸಕ ದಿನಕರ ಶೆಟ್ಟಿ ನೇತೃತ್ವದ ಗಣ್ಯರ ಸಮಿತಿ ಒಗ್ಗೂಡಿ ಕೆಲಸ ಮಾಡಿತ್ತು. ವಿದೇಶಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಿ ಅನುಭ ಹೊಂದಿರುವ ಉದ್ಯಮಿ ಬಿ.ಆರ್.ಶೆಟ್ಟಿ ಅವರನ್ನು ಸಂಪರ್ಕಿಸಲಾಗಿತ್ತು.

ಅವರನ್ನು ಕುಮಟಾಕ್ಕೆ ಕರೆಯಿಸಿ ಆಸ್ಪತ್ರೆಯ ಮಹತ್ವವನ್ನು ಮನವರಿಕೆ ಮಾಡಲಾಗಿತ್ತು. ಬಿ.ಆರ್.ಶೆಟ್ಟಿ ಅವರು ಸಮಿತಿ ಸದಸ್ಯರ ಜೊತೆ ಚರ್ಚಿಸಿ ಮಿರ್ಜಾನ್ ಬಳಿ ಆಸ್ಪತ್ರೆಗೆ ಜಾಗ ಕೂಡ ನೋಡಿದ್ದರು. ಬಳಿಕ ಅವರ ಉದ್ಯಮಗಳಿಗೆ ಉಂಟಾದ ಆರ್ಥಿಕ ತೊಂದರೆಯಿಂದ ಆಸ್ಪತ್ರೆ ಸ್ಥಾಪನೆಯ ಕನಸು ನನಸಾಗಿರಲಿಲ್ಲ.

ADVERTISEMENT

‘ಬಿ.ಆರ್.ಶೆಟ್ಟಿ ಅವರು ಆಸ್ಪತ್ರೆಯ ಬಗ್ಗೆ ಚರ್ಚಿಸಲು ಕುಮಟಾಕ್ಕೆ ಬಂದಾಗ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಎಲ್ಲವೂ ಸರಿಯಾಗಿದ್ದರೆ ಇಂದಿಗೆ ಆಸ್ಪತ್ರೆಯ ಕನಸು ನನಸಾಗುವ ಹಂತ ತಲುಪುತ್ತಿತ್ತು’ ಎಂದು ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯ ವಕೀಲ ಆರ್.ಜಿ.ನಾಯ್ಕ ಹೇಳುತ್ತಾರೆ.

‘ಕುಮಟಾದಲ್ಲಿ ಸ್ಥಾಪನೆಗೆ ಸಮ್ಮತಿ’:

‘ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಮಟಾದಲ್ಲಿಯೇ ಆಸ್ಪತ್ರೆ ಸ್ಥಾಪನೆಗೆ ಸಮ್ಮತಿಸಿದ್ದಾರೆ. ಆಸ್ಪತ್ರೆಗಾಗಿ ಮಿರ್ಜಾನ್‌ನಲ್ಲಿ 16 ಎಕರೆ ಅರಣ್ಯ ಜಾಗ ಗುರುತಿಸಿ, ಅರಣ್ಯ ಇಲಾಖೆಗೆ ಖಂಡಾಗಾರ ಬಳಿ ಕಂದಾಯ ಜಾಗ ನೀಡುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಶಾಸಕ ದಿನಕರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಈ ಬಗ್ಗೆ ಜಿಲ್ಲಾಧಿಕಾರಿ ಅವರು ಸಂಬಂಧಪಟ್ಟ ಸಚಿವರಿಗೆ ವರದಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಕೂಡ ಸ್ವತಃ ಚರ್ಚಿಸಿ ಮನವಿ ಮಾಡುತ್ತೇನೆ. ಗೋಕರ್ಣ ಮಾರ್ಗದ ಮಿಡ್ಲಗಜನಿ ಪ್ರದೇಶದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಳಿ ಇರುವ ಜಾಗ ಕೂಡ ಆಸ್ಪತ್ರೆಗಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ’ ಎಂದು ಅಭಿಪ್ರಾಯಪಡುತ್ತಾರೆ.

‘ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಬಗ್ಗೆ ಹಲವು ಬಾರಿ ಉದ್ಯಮಿ ಬಿ.ಆರ್.ಶೆಟ್ಟಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದೆ. ಅವರನ್ನು ಕುಮಟಾಕ್ಕೆ ಕರೆಸಿ ಚರ್ಚಿಸಿದಾಗ ಅವರು ಯೋಜನೆಯ ಬಗ್ಗೆ ಸಮ್ಮತಿಸಿದ್ದರು. ಆಸ್ಪತ್ರೆಯ ಅಗತ್ಯದ ಬಗ್ಗೆ ಈಗ ಮತ್ತೆ ಕೂಗು ಎದ್ದಿದ್ದು, ಜನರು ದಿನೇ ದಿನೇ ಒತ್ತಡ ತರುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.