ಮುಂಡಗೋಡ: ‘ಪಟ್ಟಣದ ನೂರಾನಿಗಲ್ಲಿ ನಿವಾಸಿ ಜಮೀರ ಅಹ್ಮದ ದರ್ಗಾವಾಲೆ ಎಂಬುವರ ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಶಬ್ಬೀರ ಅಹ್ಮದ ಮಹ್ಮದ ಹನೀಫ ಬಿಜಾಪುರ ಹಾಗೂ ಸಾಧಿಕ ದಾವಲಸಾಬ ವಾಲೀಕಾರ ಇಬ್ಬರನ್ನೂ ಭಾನುವಾರ ಬಂಧಿಸಲಾಗಿದೆ’ ಎಂದು ಸಿಪಿಐ ರಂಗನಾಥ ನೀಲಮ್ಮನವರ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.9ರಂದು ಇಲ್ಲಿನ ಶಾಸಕರ ಮಾದರಿ ಶಾಲೆ ಎದುರುಗಡೆ ಜಮೀರ ಅಹ್ಮದ ದರ್ಗಾವಾಲೆ ಎಂಬಾತನನ್ನು ಅಪಹರಿಸಿ ₹18 ಲಕ್ಷ ಹಣ ಪಡೆದು ಬಿಟ್ಟಿದ್ದರು. ಈಗಾಗಲೇ ಪ್ರಕರಣದಲ್ಲಿ ಪಾಲ್ಗೊಂಡಿದ್ದ 11 ಜನ ಆರೋಪಿಗಳನ್ನು ಬಂಧಿಸಿ, ದರೋಡೆ ಮಾಡಿದ್ದ ಹಣದ ಪೈಕಿ ₹17.75 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಪಹರಣ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಎಲ್ಲ 13 ಜನ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.
‘ತಾಲ್ಲೂಕಿನಲ್ಲಿ ಮೀಟರ್ ಬಡ್ಡಿ ವ್ಯವಹಾರ ಮಾಡುವುದು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಬಡ್ಡಿ ವ್ಯವಹಾರ ಮಾಡುವರು ಯಾರಾದರೂ ಇದ್ದರೆ, ಅಂತವರು ಕಾನೂನು ಪ್ರಕಾರ ಜೀವನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಬಡ್ಡಿ ವ್ಯವಹಾರದಿಂದ ಯಾರಿಗಾದರೂ ತೊಂದರೆ ಆಗಿದ್ದರೆ, ಠಾಣೆಗೆ ಬಂದು ದೂರು ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ನಾರಾಯಣ ಎಂ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ನಾಯ್ಕ, ಶಿರಸಿ ಡಿಎಸ್‌ಪಿ ಗಣೇಶ ಕೆ.ಎಲ್ ಅವರ ಮಾರ್ಗದರ್ಶನದಲ್ಲಿ, ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಪರುಶುರಾಮ ಮಿರ್ಜಗಿ, ಪಿಎಸ್‌ಐ ಹನಮಂತ ಕುಡಗುಂಟಿ, ಸಿಬ್ಬಂದಿ ಅನ್ವರಖಾನ ಇಸ್ಮಾಯಿಲ್ ಖಾನ್, ಕೋಟೇಶ್ವರ ನಾಗರವಳ್ಳಿ, ಮಹಾಂತೇಶ ಮುಧೋಳ, ತಿರುಪತಿ ಚೌಡಣ್ಣವರ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.