ಮುಂಡಗೋಡ: ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಒಳಪಡುವ 25 ಕೆರೆಗಳು ಹಾಗೂ ಮೂರು ಜಲಾಶಯಗಳ ನಿರ್ವಹಣೆಗೆ ಅನುದಾನದ ಕೊರತೆಯಾಗಿದೆ. ಇದರಿಂದಾಗಿ 6 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ, ತಾಲ್ಲೂಕಿನ ಕೆರೆ ಹಾಗೂ ಜಲಾಶಯಗಳ ಗೇಟ್‌ಗಳ ದುರಸ್ತಿ ಸಾಧ್ಯವಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
‘ಜಲಾಶಯಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹಿಸಿಕೊಳ್ಳುವುದು ಕಷ್ಟವಾಗಲಿದೆ. ಇದರಿಂದ ಬೇಸಿಗೆಯಲ್ಲಿ ರೈತರು ತೊಂದರೆಗೆ ಸಿಲುಕಬೇಕಾಗಬಹುದು’ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
‘ಕಳೆದ ಎರಡು ವರ್ಷಗಳಿಂದ ಸಣ್ಣ ನೀರಾವರಿ ಇಲಾಖೆಗೆ ಅನುದಾನದ ಕೊರತೆ ಕಾಡುತ್ತಿದೆ. ಈ ವರ್ಷ ಸಣ್ಣ ಕೆರೆಗಳ ಗೇಟ್‌ಗಳನ್ನು ದುರಸ್ತಿ ಮಾಡಿಸಿಲ್ಲ. ಮಳೆಗಾಲ ಆರಂಭವಾಗಲು, ಒಂದು ತಿಂಗಳು ಬಾಕಿಯಿದ್ದು, ಅನುದಾನ ಬಿಡುಗಡೆ ಆಗದಿದ್ದರೇ, ಮಳೆಯ ನೀರು ಕೆರೆ ಹಾಗೂ ಜಲಾಶಯಗಳಲ್ಲಿ ಸಂಗ್ರಹವಾಗುವುದಾದರೂ ಹೇಗೆ?’ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
‘ಕೆಲವು ಕೆರೆಗಳ ಗೇಟ್‌ಗಳನ್ನು ಅಪರಿಚಿತರು ಕಳವು ಮಾಡಿದ್ದಾರೆ. ಅಂತಹ ಕಡೆ ಹೊಸದಾಗಿ ಗೇಟ್ ಅಳವಡಿಸಬೇಕಿದೆ. ಮತ್ತೆ ಕೆಲವೆಡೆ, ಗೇಟ್‌ಗಳು ನಿರ್ವಹಣೆ ಇಲ್ಲದೇ, ತಿರುಗಿಸಲೂ ಆಗದಂತ ಸ್ಥಿತಿಯಲ್ಲಿವೆ. ಅನುದಾನದ ಕೊರತೆಯಿಂದ ಅಸಹಾಯಕರಾಗಿದ್ದೇವೆ’ ಎಂದು ಈಚೆಗೆ ನಡೆದಿದ್ದ ಕೆಡಿಪಿ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದರು.
‘ನ್ಯಾಸರ್ಗಿ ಜಲಾಶಯದ ಎಡದಂಡೆ ಕಾಲುವೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಬಲದಂಡೆ ಗೇಟ್ ದುರಸ್ತಿಯಾಗುವುದು ಬಾಕಿಯಿದೆ. ನಿರ್ವಹಣೆ ಕೊರತೆಯಿಂದ ದಡಪಾತ್ರದ ರೈತರ ಗದ್ದೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಜಲಾಶಯದ ಹೂಳು ತೆಗೆಯುವುದು, ಗೇಟ್‌ಗಳ ದುರಸ್ತಿ, ನಿರ್ವಹಣೆ ಮಾಡದಿರುವುದರಿಂದ ದಡಪಾತ್ರದ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ರೈತ ಮುಖಂಡ ನಿಂಗಪ್ಪ ಕುರುಬರ ದೂರಿದರು.
ಗೇಟ್‌ಗಳ ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆಆರ್.ಎಂ.ದಫೇದಾರ ಸಣ್ಣ ನೀರಾವರಿ ಇಲಾಖೆಯ ಎಇಇ
ರೈತರಿಂದ ಕೆಲವು ಕಡೆ ಹಾನಿ ‘ರೈತರು ತಮಗೆ ಬೇಕಾದಂತೆ ಗೇಟ್‌ಗಳನ್ನು ತಿರುಗಿಸುವುದರಿಂದ ಕೆಲವು ಹಾನಿಯಾಗಿವೆ. ಕೆಲವು ಕೆರೆಗಳ ಗೇಟ್‌ಗಳನ್ನು ಕಳವು ಮಾಡಲಾಗಿದೆ. ಸಣ್ಣಪುಟ್ಟ ದುರಸ್ತಿ ಇದ್ದರೆ ಕೂಡಲೇ ಮಾಡಿಸಲಾಗುವುದು. ಆದರೆ ದೊಡ್ಡ ಪ್ರಮಾಣದಲ್ಲಿ ದುರಸ್ತಿ ಕೆಲಸಕ್ಕೆ ಅನುದಾನ ಬೇಕಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಗೇಟ್‌ಗಳ ದುರಸ್ತಿ ಅವಶ್ಯವಿದೆ. ನಿಗದಿತ ಅವಧಿಯೊಳಗೆ ದುರಸ್ತಿ ಮಾಡಿಸಲು ಆಗದಿದ್ದರೆ ಮಳೆಗಾಲದ ನೀರು ಸಂಗ್ರಹಿಸುವುದು ಕಷ್ಟವಾಗುತ್ತದೆ. ನ್ಯಾಸರ್ಗಿ ಜಲಾಶಯ ಆಲಳ್ಳಿ ಕೆರೆ ರಾಮಾಪುರ ಜಲಾಶಯ ಮಲಬಾರ ಕೆರೆ ಸಿಂಗನಳ್ಳಿ ಕೆರೆ ಅಟ್ಟಣಗಿ ಕೆರೆ ಸನವಳ್ಳಿ ಜಲಾಶಯಗಳ ಎಡದಂಡೆ ಬಲದಂಡೆ ಹಾಗೂ ಮುಖ್ಯ ಗೇಟ್‌ಗಳ ದುರಸ್ತಿಗೆ ಅಂದಾಜು ₹40ಲಕ್ಷ ತುರ್ತಾಗಿ ಬೇಕಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಆರ್.ಎಂ.ದಫೇದಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.