ಮುಂಡಗೋಡ: ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ, ತಾಲ್ಲೂಕಿನ ಮಳಗಿ ಬಸ್ ನಿಲ್ದಾಣದ ಪ್ರವೇಶ ದ್ವಾರವನ್ನು ಬಂದ್ ಮಾಡಿರುವುದನ್ನು, ಶುಕ್ರವಾರ ತೆರವುಗೊಳಿಸಲಾಗಿದೆ. ಮೂಲ ಸೌಕರ್ಯಗಳ ಕೊರತೆ ಒಂದೆಡೆಯಾದರೆ, ನಿಲ್ದಾಣದ ಒಳಗೆ ಬಸ್‌ಗಳು ಬರುವುದಿಲ್ಲ ಎಂದು ಆರೋಪಿಸಿ, ಸ್ಥಳೀಯರು ನಿಲ್ದಾಣದ ಪ್ರವೇಶ ದ್ವಾರವನ್ನು ಗುರುವಾರ ಬಂದ್ ಮಾಡಿದ್ದರು.
ಸಾರಿಗೆ ಇಲಾಖೆಯ ಅಧಿಕಾರಿ ರಾಜಶೇಖರ ಹಾಗೂ ಸಿಬ್ಬಂದಿ ಮಳಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಸಮಸ್ಯೆಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೇ, ನಿಲ್ದಾಣದ ಒಳಗೆ ಬಸ್‌ಗಳು ಬಂದು ಹೋಗಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ʼಮುಂದಿನ ದಿನಗಳಲ್ಲಿ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ನಿಲ್ದಾಣದ ಒಳಗೆ ಬಂದು, ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಹೋಗಲು ಸೂಚನೆ ನೀಡಲಾಗುವುದು ಎಂದು ಸಾರಿಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಧಿಕಾರಿಗಳ ಭರವಸೆಯಿಂದ ಪ್ರವೇಶ ದ್ವಾರದ ಬೇಲಿಯನ್ನು ತೆರವುಗೊಳಿಸಲಾಗಿದೆ ಎಂದು ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗ ದಾನ ಮಾಡಿರುವ ಕೃಷ್ಣಮೂರ್ತಿ ಕಲ್ಕೂರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.