
ಮುಂಡಗೋಡ: ಇಲ್ಲಿನ ಸರ್ಕಾರಿ ಮರಮುಟ್ಟು ಸಂಗ್ರಹಾಲಯದಲ್ಲಿ ಶವ ಸಂಸ್ಕಾರಕ್ಕೆ ಉರುವಲು ಕಟ್ಟಿಗೆ ಮೀಸಲು ಇಡದಿರುವುದರಿಂದ, ಪಟ್ಟಣವಾಸಿಗಳು ಅಂತಿಮ ಕ್ರಿಯೆ ಮಾಡಲು, ಕಟ್ಟಿಗೆಗಾಗಿ ಪರದಾಡುವಂತ ಪರಿಸ್ಥಿತಿ ಇದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇಲ್ಲಿನ ಬಂಕಾಪುರ ರಸ್ತೆಯಲ್ಲಿ ಹಲವು ವರ್ಷಗಳಿಂದ ಉರುವಲು ಕಟ್ಟಿಗೆಯನ್ನು, ಅರಣ್ಯ ಇಲಾಖೆ ವತಿಯಿಂದ (ಸಾಮಾಜಿಕ), ಕ್ವಿಂಟಲ್ ಲೆಕ್ಕದಲ್ಲಿ ಮಾರಲಾಗುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಉರುವಲು ಕಟ್ಟಿಗೆ ಮಾರುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಉರುವಲು ಕಟ್ಟಿಗೆಗಾಗಿ ಕಾಡಿಗೆ ಹೋಗುವಂತ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಶವಸಂಸ್ಕಾರಕ್ಕೆ ಅಗತ್ಯ ಕಟ್ಟಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
‘ಯಾರಾದರೂ ಮೃತಪಟ್ಟರೇ, ಕಟ್ಟಿಗೆ ಸಂಗ್ರಹಿಸಲು, ಖರೀದಿಸಲು ಇಲ್ಲಿನ ಟಿಂಬರ್ ಡಿಪೋಕ್ಕೆ ಹೋಗಬೇಕಾಗಿದೆ. ಅಲ್ಲಿ, ಶವಸಂಸ್ಕಾರಕ್ಕೆ ಉರುವಲು ಕಟ್ಟಿಗೆ ಮೀಸಲು ಇಡುತ್ತಿಲ್ಲ. ಯಾರಾದರೂ ಖರೀದಿ ಮಾಡಿಟ್ಟಿರುವ ಕಟ್ಟಿಗೆಯನ್ನೇ, ಅವರು ಹೇಳಿದ ದರಕ್ಕೆ ಖರೀದಿಸಬೇಕಾಗಿದೆ. ಕಾಡಿಗೆ ಹೋಗದಂತೆ ನಿರ್ಬಂಧ ಹಾಕುವ ಇಲಾಖೆಯು, ಶವಸಂಸ್ಕಾರಕ್ಕೆ ಕಟ್ಟಿಗೆ ಮೀಸಲಿಡದಿರುವುದು ಯಾವ ನ್ಯಾಯ?’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
‘ಕೆಲವು ವರ್ಷಗಳ ಹಿಂದೆ ಉರುವಲು ಕಟ್ಟಿಗೆ ಖರೀದಿಸಲು ಸಿಗುತ್ತಿತ್ತು. ಇದರಿಂದ ಕಾಡಿಗೆ ಹೋಗುವ ರೂಢಿಯೂ ತಪ್ಪಿತ್ತು. ಕ್ರಮೇಣವಾಗಿ, ಉರುವಲು ಕಟ್ಟಿಗೆ ಮಾರಾಟ ಸ್ಥಗಿತಗೊಂಡಿತ್ತು. ಕೇವಲ ಟಿಂಬರ್ ಡಿಪೋದಲ್ಲಿ ಮಾತ್ರ ಉರುವಲು ಕಟ್ಟಿಗೆ ಖರೀದಿಸಬೇಕಾದ ಅನಿವಾರ್ಯತೆ ಸೃಷ್ಟಿ ಮಾಡಲಾಗಿದೆ. ಅದೂ, ಮೀಟರ್‌ಗಟ್ಟಲೇ ಖರೀದಿಸಬೇಕು. ಒಮ್ಮೇಲೆ ಅಷ್ಟು ಪ್ರಮಾಣದಲ್ಲಿ ಹೆಚ್ಚಿನ ದರ ನೀಡಿ ಖರೀದಿಸಲು ಸಾಮಾನ್ಯರಿಗೆ ಆಗುವುದಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ.
‘ಇಟ್ಟಿಗೆ ಭಟ್ಟಿ ಮಾಡುವವರು, ಕೆಲವು ವ್ಯಾಪಾರಿಗಳು ಮೀಟರ್‌ಗಟ್ಟಲೇ ಉರುವಲು ಕಟ್ಟಿಗೆ ಖರೀದಿಸಿ, ಟಿಂಬರ್ ಡಿಪೋದಲ್ಲಿ ಸಂಗ್ರಹಿಸಿಡುತ್ತಾರೆ. ಅವರಿಂದ, ಹೆಚ್ಚಿನ ದರಕ್ಕೆ ಉರುವಲು ಕಟ್ಟಿಗೆ ಖರೀದಿಸಬೇಕಾಗಿದೆ. ಸುತ್ತಲೂ ಕಾಡಿದ್ದರೂ, ಉರುವಲು ಕಟ್ಟಿಗೆಗಾಗಿ ಅಲೆದಾಡುವಂತ ಪರಿಸ್ಥಿತಿ ಉಂಟಾಗಿದೆ’ ಎಂದರು.
ಶವಸಂಸ್ಕಾರಕ್ಕೆ ಕಟ್ಟಿಗೆ ಮೀಸಲಿಟ್ಟಿಲ್ಲ. ಉರುವಲು ಕಟ್ಟಿಗೆಯ ಸಂಗ್ರಹ ಇದ್ದರೇ ಅರ್ಜಿ ನೀಡಿದರೆ ಕಟ್ಟಿಗೆ ನೀಡಲು ಕ್ರಮ ಕೈಗೊಳ್ಳುತ್ತೇವೆರವಿ ಬುರ್ಜಿ ಮರಮುಟ್ಟು ಸಂಗ್ರಹಾಲಯದ ಆರ್‌ಎಫ್‌ಒ
‘ಶವ ಸಂಸ್ಕಾರಕ್ಕೆ ಅಗತ್ಯವಿರುವ ಕಟ್ಟಿಗೆಗಾಗಿ ಟಿಂಬರ್ ಡಿಪೋದಲ್ಲಿ ಸಿಕ್ಕ ಸಿಕ್ಕವರ ಹತ್ತಿರ ಕೇಳಬೇಕಾಗಿದೆ. ಕಟ್ಟಿಗೆಗೆ ಇಂತಿಷ್ಟು ಪಾಸ್‌ಗಾಗಿ ಇಷ್ಟು ಎಂದು ಹಣವನ್ನು ನೀಡಿ ಕಟ್ಟಿಗೆ ಖರೀದಿಸಬೇಕಾಗಿದೆ. ಅರಣ್ಯ ಇಲಾಖೆಯವರು ಶವಸಂಸ್ಕಾರಕ್ಕೆ ಉರುವಲು ಕಟ್ಟಿಗೆಯನ್ನು ಮೀಸಲಿಡಬೇಕು. ತಾಲ್ಲೂಕಿನ ಕಾಡಿನಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸುವ ಇಲಾಖೆಯು ಸ್ಥಳೀಯರಿಗೆ ಉರುವಲು ಕಟ್ಟಿಗೆ ಮೀಸಲಿಡುತ್ತಿಲ್ಲ. ಕೇವಲ ಲಾಭದ ದೃಷ್ಟಿಕೋನ ಇಲಾಖೆಗೆ ಇದೆಯೇ ಹೊರತು ಮಾನವೀಯತೆ ಮರೆಯಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಬಾಬುರಾವ್ ವಾಲ್ಮೀಕಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.