ಮುಂಡಗೋಡ: ದಶಕಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ, ಪಟ್ಟಣ ಪಂಚಾಯಿತಿಯವರು ನಮೂನೆ-3 ನೀಡುತ್ತಿಲ್ಲ ಎಂದು ಆರೋಪಿಸಿ, ಪಟ್ಟಣದ ಇಂದಿರಾ ನಗರ, ಆನಂದ ನಗರ, ಗಣೇಶ ನಗರ, ಗಾಂಧಿನಗರ ನಿವಾಸಿಗಳು, ಇಲ್ಲಿನ ಪಟ್ಟಣ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಅರಣ್ಯ ಅತಿಕ್ರಮಣ ನಿವೇಶನಗಳ ಹಕ್ಕು ಹೋರಾಟ ಸಮಿತಿ ಆಶ್ರಯದಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಆರಂಭಿಸಿದ ನಾಲ್ಕು ವಾರ್ಡ್‌ಗಳ ನಿವಾಸಿಗಳು, ಕೇವಲ ಭರವಸೆ ನೀಡುವ ಅಧಿಕಾರಿಗಳು, ಕಾರ್ಯರೂಪಕ್ಕೆ ತರಲು ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.
ನಾಲ್ಕು ವಾರ್ಡ್‌ಗಳಲ್ಲಿ 800ಕ್ಕೂ ಹೆಚ್ಚು ಕುಟುಂಬಗಳು ದಶಕಗಳಿಂದ ವಾಸಿಸುತ್ತಿವೆ. 2017ರ ವರೆಗೂ ನಮೂನೆ-3 ವಿತರಣೆ ಮಾಡಿ, ಮನೆ ತೆರಿಗೆಯನ್ನು ತುಂಬಿಸಿಕೊಂಡಿದ್ದಾರೆ. ನಂತರದ ವರ್ಷಗಳಲ್ಲಿ ಒಬ್ಬೊಬ್ಬ ಅಧಿಕಾರಿ, ಒಂದೊಂದು ಕಾನೂನು, ನಿಯಮ ಹೇಳುತ್ತ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಅಲ್ಲಿಖಾನ ಪಠಾಣ ಆರೋಪಿಸಿದರು.
ವಿವಿಧ ವಸತಿ ಯೋಜನೆಯಡಿ ಹಲವರು ಮನೆಗಳನ್ನು ಈ ವಾರ್ಡ್‌ಗಳಲ್ಲಿ ನಿರ್ಮಿಸಿಕೊಂಡಿದ್ದಾರೆ. ಪಟ್ಟಣ ಪಂಚಾಯಿತಿ ವತಿಯಿಂದ ಮನೆ ಕರ, ನೀರಿನ ಕರ ಸಹ ತುಂಬಿಸಿಕೊಂಡಿದ್ದಾರೆ. ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ನಮೂನೆ-3 ವಿತರಣೆಗೆ ಆಗ್ರಹಿಸಿ, ಕಳೆದ ವರ್ಷ ಪ್ರತಿಭಟನೆ ನಡೆಸಿದಾಗ, ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ, ಈಗ ಕಾನೂನಿನ ನೆಪ ಹೇಳುತ್ತ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಯುವಮುಖಂಡ ವಿಠ್ಠಲ ಬಾಳಂಬೀಡ ದೂರಿದರು.
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ, ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ಅರಿತು, ಜನರ ಸಮಸ್ಯೆಗೆ ಸ್ಪಂದಿಸಬೇಕು. 50-60 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುವರಿಗೆ ನಮೂನೆ-3 ನೀಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಶಂಕರ ಗೌಡಿ ಹಾಗೂ ಮುಖ್ಯಾಧಿಕಾರಿ ಕುಮಾರ ನಾಯ್ಕ ಪ್ರತಿಭಟನಾನಿರತರೊಂದಿಗೆ ಚರ್ಚಿಸಿದರು.
ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನಮೂನೆ-3 ವಿತರಿಸಲು ಆಗುವುದಿಲ್ಲ. ಶಾಸಕ ಶಿವರಾಮ ಹೆಬ್ಬಾರ ಅವರೊಂದಿಗೆ ಸಭೆ ಮಾಡಿ, ಒಂದು ನಿರ್ಧಾರಕ್ಕೆ ಬರಲು, ಕೆಲ ದಿನಗಳ ಸಮಯವಕಾಶ ನೀಡಬೇಕು. ಕೂಡಲೇ, ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ತಹಶೀಲ್ದಾರ್ ಹೇಳಿದರು. ಆದರೆ, ಪ್ರತಿಭಟನಾನಿರತರು ಇದಕ್ಕೆ ಒಪ್ಪಲಿಲ್ಲ.
ಶಾಸಕ ಹೆಬ್ಬಾರ ಭರವಸೆ: ಸಂಜೆಯ ವೇಳೆಗೆ ಶಾಸಕ ಶಿವರಾಮ ಹೆಬ್ಬಾರ ಪ್ರತಿಭಟನಾ ಸ್ಥಳಕ್ಕೆ ಬಂದು, ಸಮಸ್ಯೆಯನ್ನು ಆಲಿಸಿದರು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ಕುರಿತು ಶೀಘ್ರವೇ ಚರ್ಚಿಸಲಾಗುವುದು. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ನಿವಾಸಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ನಿವಾಸಿಗಳು ಆತಂಕಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಮಹ್ಮದಜಾಫರ ಹಂಡಿ, ಹುಲಗಪ್ಪ ಭೋವಿ, ಶಿವು ಮತ್ತಿಗಟ್ಟಿ, ನಿಸಾರ ಅಹ್ಮದ ಬ್ಯಾಕೋಡ, ರಾಜು ಭೋವಿ, ಮುಷ್ತಾಕ, ಜಾಫರ ಚೌಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.