ADVERTISEMENT

ಮುಂಡಗೋಡ| ಶುದ್ಧ ನೀರಿನಿಂದ ಗ್ರಾಮಸ್ಥರು ವಂಚಿತ: ವರ್ಷದಿಂದ ಘಟಕ ಸ್ಥಗಿತ

​ಶಾಂತೇಶ ಬೆನಕನಕೊಪ್ಪ
Published 18 ಫೆಬ್ರುವರಿ 2026, 7:27 IST
Last Updated 18 ಫೆಬ್ರುವರಿ 2026, 7:27 IST
ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಗ್ರಾಮದಲ್ಲಿ ಇರುವ ಶುದ್ಧ ನೀರಿನ ಘಟಕ ದುರಸ್ತಿ ಕಾಣದೇ ಬಂದಾಗಿರುವುದು
ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಗ್ರಾಮದಲ್ಲಿ ಇರುವ ಶುದ್ಧ ನೀರಿನ ಘಟಕ ದುರಸ್ತಿ ಕಾಣದೇ ಬಂದಾಗಿರುವುದು   

ಮುಂಡಗೋಡ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಿದ್ದ ಘಟಕಗಳು ಬಾಗಿಲು ಮುಚ್ಚಿ ಆರು ತಿಂಗಳು, ವರ್ಷ ಕಳೆದಿವೆ. ಇಚ್ಛಾಶಕ್ತಿಯ ಕೊರತೆಯಿಂದ ಗ್ರಾಮೀಣ ಜನರು, ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ ಎಂಬ ದೂರು ಹೆಚ್ಚುತ್ತಿದೆ.

ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳ ಪೈಕಿ ಅರ್ಧದಷ್ಟು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿ ಕಾಣದೇ ಸ್ಥಗಿತಗೊಂಡಿವೆ. ಜನರು ಪ್ರತಿಭಟಿಸಿದಾಗ, ತಾತ್ಕಾಲಿಕ ದುರಸ್ತಿ ಕಾಣುವ ಈ ಘಟಕಗಳು, ನಂತರ ಮತ್ತದೇ ಹಳೆಯ ವ್ಯವಸ್ಥೆಗೆ ಒಗ್ಗಿಕೊಂಡು, ನೀರು ನೀಡದೇ ಬಾಗಿಲು ಮುಚ್ಚಿಕೊಳ್ಳುತ್ತಿವೆ ಎಂಬುದು ಗ್ರಾಮಸ್ಥರ ಆರೋಪ.

‘ನಮ್ಮೂರಿನಲ್ಲಿ ಎರಡು ನೀರಿನ ಘಟಕಗಳಿವೆ. ಹೆಚ್ಚು ಕಡಿಮೆ ಒಂದು ವರ್ಷ ಕಳೆದಿದೆ. ಎರಡೂ ಘಟಕಗಳು ದುರಸ್ತಿ ಕಾಣದೇ ಸ್ಥಗಿತಗೊಂಡಿವೆ. 12 ಕಿ.ಮೀ ದೂರದ ಮುಂಡಗೋಡಕ್ಕೆ ಹೋದಾಗ, ನಾಣ್ಯ ಹಾಕಿ, ಫಿಲ್ಟರ್‌ ನೀರು ಅಲ್ಲಿಂದ ತೆಗೆದುಕೊಂಡು ಬರುತ್ತೇವೆ. ಘಟಕಗಳ ದುರಸ್ತಿಗೆ ಸಂಬಂಧಿಸಿದವರಿಗೆ ಹೇಳಿ ಹೇಳಿ ಜನರು ಕೈ ಚೆಲ್ಲಿದ್ದಾರೆ. ನಲ್ಲಿಯಲ್ಲಿ ಸಣ್ಣದಾಗಿ ಬರುವ ನೀರೇ ಈ ಊರಿನ ಜನರಿಗೆ ಶುದ್ಧ ನೀರಾಗಿದೆ’ ಎನ್ನುತ್ತಾರೆ ಮೈನಳ್ಳಿ ಗ್ರಾಮದ ಅಶೋಕ.

ADVERTISEMENT

‘ಚಿಗಳ್ಳಿ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡಿಸಿ ಎಂದು ಪಿಡಿಒ ಅವರಿಗೆ ಹೇಳಿದರೆ, ಅನುದಾನದ ಕೊರತೆಯಿದೆ ಎನ್ನುತ್ತಾರೆ. ಬೇಸಿಗೆ ಆರಂಭದಲ್ಲಿಯೇ ನೀರಿನ ಸಮಸ್ಯೆ ಆಗುತ್ತಿದ್ದು, ಶುದ್ಧ ನೀರು ಪೂರೈಸಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ವಕೀಲ ಗುಡ್ಡಪ್ಪ ಕಾತೂರ ಆಗ್ರಹಿಸುತ್ತಾರೆ.

‘ಕಾತೂರ ಗ್ರಾಮದ ದೇವಸ್ಥಾನ ಸನಿಹ ಇರುವ ಶುದ್ಧ ನೀರಿನ ಘಟಕ ಬಂದಾಗಿ ಹಲವು ತಿಂಗಳುಗಳೇ ಕಳೆದಿವೆ. ದುರಸ್ತಿಗಾಗಿ ಜನರು ಒತ್ತಾಯಿಸಿದರೂ, ಗ್ರಾಮ ಪಂಚಾಯಿತಿಯವರು ತಲೆ ಕೆಡಿಸಿಕೊಂಡಿಲ್ಲ’ ಎಂದು ಗ್ರಾಮಸ್ಥ ಚಂದ್ರಶೇಖರ ಹೇಳಿದರು.

‘ಚವಡಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದೆ ಎಂಬುದನ್ನೇ ಜನರು ಮರೆಯುವಷ್ಟು, ಅಲ್ಲಿನ ಘಟಕ ದುರಸ್ತಿ ಕಾಣದೇ ಹಲವು ತಿಂಗಳುಗಳು ಕಳೆದಿದೆ. ಜೆಜೆಎಂ ಯೋಜನೆಯಡಿ ಬರುವ ನೀರೂ ಸಹ ಸಾಕಾಗುತ್ತಿಲ್ಲ. ಶುದ್ಧ ಕುಡಿಯುವ ನೀರು ಇಲ್ಲಿನ ಜನರಿಗೆ ಮರೀಚಿಕೆಯಾಗಿದೆ’ ಎಂದು ಗ್ರಾಮಸ್ಥ ಫಕ್ಕೀರಪ್ಪ ದೂರಿದರು.

ಶುದ್ಧ ನೀರಿನ ಘಟಕಗಳ ದುರಸ್ತಿ ಕುರಿತು ಫೆ.20ರಂದು ನಡೆಯುವ ಕುಡಿಯುವ ನೀರಿನ ಸಭೆಯಲ್ಲಿ ಚರ್ಚಿಸಲಾಗುವುದು. ನಿರ್ವಹಣೆಯ ಜವಾಬ್ದಾರಿ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು
ಶಂಕರ ಗೌಡಿ ತಹಶೀಲ್ದಾರ್‌

ತಂತ್ರಜ್ಞರು ಬರುತ್ತಿಲ್ಲ

ಸಾಲಗಾಂವ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಶುದ್ಧ ನೀರಿನ ಘಟಕ ಮುಚ್ಚಿದೆ. ದುರಸ್ತಿಗಾಗಿ ಧಾರವಾಡದ ನಿರ್ವಹಣಾ ಸಿಬ್ಬಂದಿ ಒಬ್ಬರಿಗೆ ಹತ್ತಾರು ಬಾರಿ ಕರೆ ಮಾಡಿದರೂ ಒಂದು ಸಲ ಬಂದು ಹೋದವರು. ಮತ್ತೆ ತಿರುಗಿ ಬಂದಿಲ್ಲ. ದುರಸ್ತಿ ಹಾಗೂ ನಿರ್ವಹಣೆಗೆ ನುರಿತ ಸಿಬ್ಬಂದಿ ಕೊರತೆಯಿಂದ ಇಂತಹ ಸಮಸ್ಯೆ ಎದುರಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟಪ್ಪ ಗುಲ್ಯಾನವರ ಅಸಹಾಯಕತೆಯಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.