ADVERTISEMENT

ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಸಂಜೆ ಶಿಕ್ಷಣ: ಪ್ರಯೋಗಕ್ಕೆ ಪಾಲಕರ ಸಾಥ್

​ಶಾಂತೇಶ ಬೆನಕನಕೊಪ್ಪ
Published 23 ಜನವರಿ 2026, 8:12 IST
Last Updated 23 ಜನವರಿ 2026, 8:12 IST
ಮುಂಡಗೋಡದಲ್ಲಿ ಶಿಕ್ಷಕರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ್ದರು
ಮುಂಡಗೋಡದಲ್ಲಿ ಶಿಕ್ಷಕರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ್ದರು   

ಮುಂಡಗೋಡ: ಶಾಲಾವಧಿ ಮುಗಿದ ನಂತರವೂ, ವಿದ್ಯಾರ್ಥಿಗಳು ಗುಂಪು ಅಧ್ಯಯನದಲ್ಲಿ ತೊಡಗುತ್ತಿದ್ದಾರೆ. ವಿದ್ಯಾರ್ಥಿಗಳು ಸತತ ಕಲಿಕೆಯಿಂದ ಉತ್ಸಾಹ ಕುಗ್ಗದಿರಲಿ ಎಂಬ ಕಾಳಜಿಯಾಗಿ, ಸಂಜೆಯ ವೇಳೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಹಾಲು, ಬಿಸ್ಕತ್ ನೀಡಿ, ಕೆಲ ಹೊತ್ತು ವಿಶ್ರಾಂತಿಗೆ ಸಮಯ ಮೀಸಲಿಡುತ್ತಾರೆ. ನಂತರ, ಸಿದ್ಧಪಡಿಸಿದ ಪ್ರಶ್ನೆಗಳನ್ನು ಕೈಗಿಟ್ಟು, ಸಮರ್ಪಕ ಉತ್ತರದೊಂದಿಗೆ ವಿಷಯವಾರು ಶಿಕ್ಷಕರ ಎದುರು ಅಂದಿನ ಕಲಿಕೆಯನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಬೇಕು. ಶಿಕ್ಷಕರ ಈ ಹೆಚ್ಚುವರಿ ‘ಕಲಿಕಾ ಪ್ರಯೋಗ’ಕ್ಕೆ ಪಾಲಕರೂ ಸಾಥ್‌ ನೀಡುತ್ತಿದ್ದಾರೆ.

ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಕೈಗೊಂಡಿರುವ ಕ್ರಮಗಳು ಇದಾಗಿವೆ. ಕೆಲ ಪ್ರೌಢಶಾಲೆಗಳಲ್ಲಿ ಶಾಲಾವಧಿ ಮುಗಿದ ನಂತರವೂ, 2ರಿಂದ 3ಗಂಟೆಗಳ ಕಾಲ ಹೆಚ್ಚುವರಿಯಾಗಿ, ಕಲಿಕಾಮಟ್ಟ ವೃದ್ಧಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.

‘ಮೊದಲ ಪೂರ್ವಸಿದ್ಧತಾ ಪರೀಕ್ಷೆ ಮುಗಿದಿದ್ದು, ಅದರಲ್ಲಿ ನಿರೀಕ್ಷಿತ ಫಲಿತಾಂಶ ದಾಖಲಿಸಲು ಹಿನ್ನಡೆ ಅನುಭವಿಸಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಮಕ್ಕಳಲ್ಲಿ ಹಿನ್ನಡೆ, ಮುನ್ನಡೆ ಎಂಬ ತಾರತಮ್ಯ ಬಾರದಿರಲಿ ಎಂಬ ಆಶಯದಿಂದ, ಉನ್ನತ ಶ್ರೇಣಿ ಪಡೆದವರಿಂದ ಹಿಡಿದು ನಿರೀಕ್ಷಿತ ಫಲಿತಾಂಶಕ್ಕೆ ಒಂದು ಹೆಜ್ಜೆ ಹಿಂದಿರುವ ಎಲ್ಲ ವಿದ್ಯಾರ್ಥಿಗಳಿಗೂ, ಹೆಚ್ಚುವರಿ ಸಮಯದ ಕಲಿಕೆಯನ್ನು ಕೈಗೊಳ್ಳಲಾಗುತ್ತಿದೆ’ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ADVERTISEMENT

‘ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಯಾಗಿತ್ತು. ಈ ಬಾರಿ ಫಲಿತಾಂಶ ಹೆಚ್ಚಳಕ್ಕೆ ಒಂದು ತಿಂಗಳು ಮುಂಚಿತವಾಗಿಯೇ ಕ್ರಮಗಳನ್ನು ಆರಂಭಿಸಲಾಗಿದೆ. ಪರೀಕ್ಷೆಗಳಲ್ಲಿ ಹಿನ್ನಡೆ ಅನುಭವಿಸಿದ್ದರೇ, ನಿಖರ ಕಾರಣವನ್ನು ಹುಡುಕಿ, ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಪರೀಕ್ಷೆಯನ್ನು ಭಯಮುಕ್ತ ವಾತಾವರಣದಲ್ಲಿ ಬರೆಯುವಂತೆ, ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುತ್ತಿದೆ’ ಎಂದು ಆದಿಜಾಂಭವ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್‌.ಡಿ.ಮುಡೆಣ್ಣವರ ಹೇಳಿದರು.

‘ಶಾಲೆ ಬಿಟ್ಟು ಹೋದ ನಂತರ ಮನೆಯಲ್ಲಿ ಇಷ್ಟೇ ಸಮಯ ಎಂದು ಮೊದಲು ಓದುತ್ತಿರಲಿಲ್ಲ. ಆದರೆ, ಶಿಕ್ಷಕರು ಮನೆಗೆ ಭೇಟಿ ನೀಡಿ, ಓದುತ್ತಿದ್ದೇವೆ ಇಲ್ಲವೋ ಎಂದು ನೋಡುತ್ತಾರೆ. ಕೆಲವೊಮ್ಮೆ ಪಾಲಕರಿಗೂ ಕರೆ ಮಾಡಿ, ಓದುತ್ತಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾರೆ.ಇದರಿಂದ ವ್ಯಾಸಂಗದಲ್ಲಿ ಶಿಸ್ತು ಬಂದಿದೆ’ ಎನ್ನುತ್ತಾರೆ ವಿದ್ಯಾರ್ಥಿನಿ ಸಂಗೀತಾ ಕಟ್ಟಿಮನಿ

ಪೂರ್ವಸಿದ್ಧತೆ ಪರೀಕ್ಷೆ ಫಲಿತಾಂಶ ಆಧರಿಸಿ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಪಟ್ಟಿ ಮಾಡಲಾಗಿದೆ. ಅವರಿಗೆ ವಿಶೇಷ ಬೋಧನೆ ಮೂಲಕ ಸಿದ್ಧಗೊಳಿಸಲಾಗುತ್ತಿದೆ
ಸುಮಾ ಜಿ. ಕ್ಷೇತ್ರ ಶಿಕ್ಷಣಾಧಿಕಾರಿ

70 ವಿದ್ಯಾರ್ಥಿಗಳತ್ತ ಹೆಚ್ಚು ಗಮನ

‘ತಾಲ್ಲೂಕಿನಲ್ಲಿ ಈ ಸಲ 1456 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿದ್ದು ಅದರಲ್ಲಿ 70 ವಿದ್ಯಾರ್ಥಿಗಳು ಅನುತ್ತೀರ್ಣ ಆಗಬಹುದು ಎಂದು ವಿವಿಧ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಪ್ರಾಥಮಿಕ ವರದಿ ನೀಡಿದ್ದಾರೆ. ಇನ್ನೂ ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಮಾಡಬೇಕಿದ್ದು ಅಂತಿಮ ಪರೀಕ್ಷೆಗೆ ಇನ್ನೂ 55 ದಿನಗಳು ಬಾಕಿಯಿವೆ. ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳತ್ತ ಹೆಚ್ಚು ಗಮನ ನೀಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.