ADVERTISEMENT

Karnataka Rains | ಮುಂಡಗೋಡ: ರೈತರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:13 IST
Last Updated 20 ಅಕ್ಟೋಬರ್ 2025, 6:13 IST
ಮುಂಡಗೋಡ ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದ ಗೋವಿನಜೋಳ ಬೆಳೆಗೆ ಮಳೆಯಿಂದ ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್‌ ತಾಡಪತ್ರಿ ಹೊದಿಕೆ ಹಾಕಲಾಗಿತ್ತು
ಮುಂಡಗೋಡ ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದ ಗೋವಿನಜೋಳ ಬೆಳೆಗೆ ಮಳೆಯಿಂದ ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್‌ ತಾಡಪತ್ರಿ ಹೊದಿಕೆ ಹಾಕಲಾಗಿತ್ತು   

ಮುಂಡಗೋಡ: ಅತಿಯಾದ ಮಳೆ ನಡುವೆಯೂ ಅಲ್ಪಸ್ವಲ್ಪ ಕೈಗೆ ಬಂದಿರುವ ಗೋವಿನಜೋಳಕ್ಕೆ ಮತ್ತೆ ಮಳೆ ಕಾಡುತ್ತಿದ್ದು, ಒಣಗಲು ಹಾಕಿದ್ದ ಗೋವಿನಜೋಳವನ್ನು ತಂಪು ಮಾಡುತ್ತ, ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಕಳೆದ ಕೆಲ ದಿನಗಳಿಂದ ಬಿರು ಬಿಸಿಲು ಇದ್ದಂತ ವಾತಾವರಣದಲ್ಲಿಯೇ, ಏಕಾಏಕಿ ಮಳೆ ಸುರಿಯುತ್ತಿದೆ. ಒಮ್ಮೆಲೆ ಬರುವ ಮಳೆಯಿಂದ ಗಲಿಬಿಲಿಗೊಳ್ಳುತ್ತಿರುವ ರೈತರು, ಪ್ಲಾಸ್ಟಿಕ್‌ ತಾಡಪತ್ರಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ಈ ವರ್ಷ ಗೋವಿನಜೋಳ ಮಾರುಕಟ್ಟೆಗೆ ಕಡಿಮೆ ಬಂದರೂ, ದರದಲ್ಲಿಯೂ ಏರಿಕೆ ಕಂಡಿಲ್ಲ. ಒಂದೆಡೆ ಮಳೆಯ ಕಾಟ, ಮತ್ತೊಂದೆಡೆ ದರ ಕುಸಿತ ಗೋವಿನಜೋಳ ಬೆಳೆಗಾರರ ನೆಮ್ಮದಿ ಕೆಡಿಸಿದೆ. ಬೆಳೆ ಕಡಿಮೆ ಇದ್ದಾಗ, ಮಾರುಕಟ್ಟೆಯಲ್ಲಿ ದರ ಏರುವುದು ಸಹಜ. ಆದರೆ, ಬೆಳೆ ಕಡಿಮೆ ಬಂದರೂ, ದರದಲ್ಲಿಯೂ ಕುಸಿತ ಆಗಿದೆ ಎಂದು ರೈತರು ನೋವು ತೋಡಿಕೊಳ್ಳುತ್ತಿದ್ದಾರೆ.

ADVERTISEMENT

‘ಕಳೆದ ಸಲಕ್ಕಿಂತ ಅರ್ಧದಷ್ಟು ಬೆಳೆ ಬಂದಿಲ್ಲ. ಬಂದಿರುವುದರಲ್ಲಿಯೇ ಸಮಾಧಾನ ಮಾಡಿಕೊಳ್ಳಬೇಕಾಗಿದೆ. ಇಲ್ಲಿನ ಎಪಿಎಂಸಿ ಆವರಣದಲ್ಲಿ ಎರಡು ದಿನಗಳ ಹಿಂದೆ ಒಣಗಲು ಹಾಕಿದ್ದೆ. ಆದರೆ, ಏಕಾಏಕಿ ಮಳೆ ಸುರಿದಿದ್ದರಿಂದ ಬೆಳೆ ತಂಪಾಗುವ ಆತಂಕ ಮೂಡಿದೆ. ನಿರಂತರವಾಗಿ ಮಳೆ ಸುರಿದರೆ, ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗುತ್ತದೆ. ಗೋವಿನಜೋಳ ಬೆಳೆದವರ ಪಾಡು ಈ ವರ್ಷ ಹೇಳ ತೀರದು. ಈ ವರ್ಷ ಗೋವಿನಜೋಳ ಬೆಳೆದ ರೈತರಿಗೆ ಮಳೆ ಸುಖ ನೀಡಲಿಲ್ಲ. ವ್ಯಾಪಾರಸ್ಥರೂ ದರ ಕಡಿಮೆ ಮಾಡಿ, ಖರೀದಿ ಮಾಡುತ್ತಿದ್ದಾರೆ. ಸರ್ಕಾರ ಗೋವಿನಜೋಳ ಬೆಳೆದ ರೈತರಿಗೆ ತಕ್ಕ ಮಟ್ಟಿಗೆ ಪರಿಹಾರ ನೀಡುವಂತಾಗಬೇಕುʼ ಎಂದು ರೈತ ಬಾಬುರಾವ್‌ ಹೇಳಿದರು.

‘ಪ್ರತಿ ವರ್ಷ ದೀಪಾವಳಿ ಹಬ್ಬದ ಎಡಬಲದಲ್ಲಿ ಗೋವಿನಜೋಳ ಬೆಳೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆಯಿಡುತ್ತಿತ್ತು. ಆದರೆ, ಈ ವರ್ಷ ಅಲ್ಲೊಂದು ಇಲ್ಲೊಂದು ಕಡೆ ಒಣಗಲು ಹಾಕಿರುವುದನ್ನು ಮಾತ್ರ ಕಾಣಬಹುದು. ಈಗಲೂ ಮಳೆ ಕಾಡುತ್ತಿರುವುದು ನೋಡಿದರೆ, ಹಿಡಿ ಕಾಳು ಕೈಗೆ ಸಿಗುವುದು ಅನುಮಾನ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.