ADVERTISEMENT

ನಾಗರ ಪಂಚಮಿ ಸರಳ ಆಚರಣೆ

ದೇವಾಲಯಗಳಲ್ಲಿ ಜನರ ಪ್ರವೇಶ ನಿಷೇಧ; ಮನೆಗಳಲ್ಲಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:00 IST
Last Updated 25 ಜುಲೈ 2020, 12:00 IST
ಶಿರಸಿ ತಾಲ್ಲೂಕಿನ ಸೋದೆ ವಾದಿರಾಜ ಮಠದಲ್ಲಿ ನಾಗರ ಕಲ್ಲಿಗೆ ವೈದಿಕರೊಬ್ಬರು ಅಭಿಷೇಕ ನೆರವೇರಿಸಿದರು
ಶಿರಸಿ ತಾಲ್ಲೂಕಿನ ಸೋದೆ ವಾದಿರಾಜ ಮಠದಲ್ಲಿ ನಾಗರ ಕಲ್ಲಿಗೆ ವೈದಿಕರೊಬ್ಬರು ಅಭಿಷೇಕ ನೆರವೇರಿಸಿದರು   

ಶಿರಸಿ: ಕೋವಿಡ್ 19 ಕಾರಣಕ್ಕೆ ತಾಲ್ಲೂಕಿನೆಲ್ಲೆಡೆ ಸಾರ್ವಜನಿಕ ಸ್ಥಳಗಳು, ದೇವಾಲಯಗಳಲ್ಲಿ ನಾಗರ ಪಂಚಮಿಯನ್ನು ಸರಳವಾಗಿ ಆಚರಿಸಲಾಯಿತು. ಮನೆಗಳಲ್ಲಿ ಹಬ್ಬದ ಸಂಭ್ರಮೋತ್ಸಾಹ ಇಮ್ಮಡಿಸಿತು.

ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರತಿವರ್ಷ ಸಹಸ್ರಾರು ಜನರು ಸೇರುತ್ತಿದ್ದ ಇಲ್ಲಿನ ನಿಲೇಕಣಿಯ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ದೇವಾಲಯಕ್ಕೆ ತೆರಳುವ ಬಾಗಿಲು ಬಂದಾಗಿತ್ತು. ಭಕ್ತರು ಹೊರ ಆವರಣದಲ್ಲಿದ್ದ ನಾಗರ ಕಲ್ಲಿಗೆ ಹಾಲೆರೆದು, ಹಣ್ಣು–ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ದೇವಾಲಯಗಳಲ್ಲಿ ಜನರ ಪ್ರವೇಶಕ್ಕೆ ಅವಕಾಶವಿಲ್ಲದೇ, ವೈದಿಕರು ಧಾರ್ಮಿಕ ಆಚರಣೆಗಳನ್ನು ನಡೆಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜನರು ನಾಗರ ಬನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಉರಗ ರಕ್ಷಕ ಪ್ರಶಾಂತ ಹುಲೇಕಲ್ ಅವರು, ಕುಟುಂಬದ ಸದಸ್ಯರೊಡಗೂಡಿ, ಪ್ರತಿವರ್ಷದಂತೆ ಈ ವರ್ಷ ಕೂಡ ನಿಜ ನಾಗರಕ್ಕೆ ಪೂಜೆ ಸಲ್ಲಿಸಿದರು. ಅವರ ಮಕ್ಕಳಾದ ಆಕರ್ಷಾ ಹಾಗೂ ವಿರಾಜ್ ಕೂಡ ನಾಗರ ಹಾವಿಗೆ ಹೂ ಹಾಕಿ–ಹಾಲೆರೆದರು. ಉರಗ ರಕ್ಷಕರಾಗಿದ್ದ ದಿವಂಗತ ಸುರೇಶ ಹುಲೇಕಲ್ ಕುಟುಂಬದವರು ಮೂರು ದಶಕಗಳಿಂದ ನಿಜ ನಾಗರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ರೂಢಿಸಿಕೊಂಡು ಬಂದಿದ್ದಾರೆ. ತಂದೆ ಪ್ರಾರಂಭಿಸಿರುವ ಆಚರಣೆಯನ್ನು ಅವರ ಮಗ ಪ್ರಶಾಂತ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ADVERTISEMENT

‘ಹಾವಿನ ಬಗ್ಗೆ ಜನರಲ್ಲಿರುವ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ನಿಜ ಹಾವನ್ನು ತಂದು ಪೂಜಿಸುತ್ತೇವೆ. ಪೂಜೆಯ ನಂತರ ಮರಳಿ ಕಾಡಿಗೆ ಬಿಡುತ್ತೇವೆ. ಹಾವು ಪರಿಸರ ಸಮತೋಲನ ಕಾಪಾಡುವ ಜೀವಿಗಳು. ಹಾವನ್ನು ದ್ವೇಷಿಸುವ ಮನೋಭಾವ ಬದಲಾಗಬೇಕು. ಹಾವನ್ನು ಕಂಡಾಗ ಕೊಲ್ಲುವ ಬದಲಾಗಿ ಓಡಿಸುವ ಪ್ರಯತ್ನ ಮಾಡಬೇಕು’ ಎಂದು ಪ್ರಶಾಂತ ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.