ಕಾರವಾರದ ಸುಂಕೇರಿಯಲ್ಲಿರುವ ‘ನಮ್ಮ ಕ್ಲಿನಿಕ್’ ಇಕ್ಕಟ್ಟಾದ ಜಾಗದಲ್ಲಿ ನಡೆಯುತ್ತಿರುವುದು
ಕಾರವಾರ: ಬಡವರು, ಶ್ರಮಿಕ ವರ್ಗದವರು ಹೆಚ್ಚಾಗಿ ನೆಲೆಸಿದ ಪ್ರದೇಶಗಳಲ್ಲಿ ಸುಲಭವಾಗಿ ಆರೋಗ್ಯ ಸೌಲಭ್ಯ ಸಿಗುವಂತಾಗಲು ಜಿಲ್ಲೆಯ 9 ಕಡೆಗಳಲ್ಲಿ ಸ್ಥಾಪಿಸಿದ ‘ನಮ್ಮ ಕ್ಲಿನಿಕ್’ಗಳಲ್ಲಿ ಕಾಯಂ ವೈದ್ಯರಿಲ್ಲದ ಕೊರಗು ಕಾಡುತ್ತಿದೆ.
ಶುಶ್ರೂಷಕಿಯರೇ ಬಹುತೇಕ ಕಡೆ ವೈದ್ಯರ ಕೆಲಸ ನಿಭಾಯಿಸಬೇಕಾದ ಸ್ಥಿತಿ ಎದುರಾಗಿದೆ. ಸಮುದಾಯ ಭವನ, ಅನ್ಯ ಇಲಾಖೆಗಳಿಗೆ ಸೇರಿದ ಕಟ್ಟಡದಲ್ಲಿ ಕ್ಲಿನಿಕ್‍ನ್ನು ತರಾತುರಿಯಲ್ಲಿ ಆರಂಭಿಸಲಾಗಿದೆ. ಬಹುತೇಕ ಕಡೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಇಕ್ಕಟ್ಟಾದ ಜಾಗದಲ್ಲಿ ಕ್ಲಿನಿಕ್ ನಡೆಸುವುದು ಸವಾಲಾಗುತ್ತಿದೆ ಎಂಬುದು ಸಿಬ್ಬಂದಿಯ ಅಳಲು.
ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಮಂಕಿ, ಭಟ್ಕಳ, ಜಾಲಿ, ಮುಂಡಗೋಡ, ಯಲ್ಲಾಪುರ ಮತ್ತು ಹಳಿಯಾಳದಲ್ಲಿ ‘ನಮ್ಮ ಕ್ಲಿನಿಕ್’ಗಳು ಕಾರ್ಯನಿರ್ವಹಿಸುತ್ತಿವೆ. ಕ್ಲಿನಿಕ್‌ಗಳಲ್ಲಿ ಔಷಧಗಳ ದಾಸ್ತಾನು ಇದ್ದು, ರಕ್ತ ತಪಾಸಣೆಯ ವ್ಯವಸ್ಥೆಯೂ ಇದೆ. ಪ್ರತಿ ಕ್ಲಿನಿಕ್‌ನಲ್ಲಿ ತಲಾ ಒಬ್ಬರು ಶುಶ್ರೂಷಕಿ, ಪ್ರಯೋಗಾಲಯ ತಜ್ಞ, ಡಿ ಗ್ರುಪ್ ಸಿಬ್ಬಂದಿ ಇದ್ದಾರೆ. ಆದರೆ, ಕಾಯಂ ವೈದ್ಯರಿಲ್ಲದೆ, ಅನ್ಯ ಸರ್ಕಾರಿ ಆಸ್ಪತ್ರೆಯ ವೈದ್ಯರು ವಾರಕ್ಕೆ ನಿಗದಿತ ದಿನ ಮಾತ್ರ ಭೇಟಿ ನೀಡುತ್ತಿದ್ದಾರೆ.
‘ಕಾರವಾರದ ಸುಂಕೇರಿಯಲ್ಲಿನ ‘ನಮ್ಮ ಕ್ಲಿನಿಕ್’ನಲ್ಲಿ ಆರೋಗ್ಯ ಸೌಲಭ್ಯ ಉತ್ತಮವಾಗಿದೆ. ಸಿಬ್ಬಂದಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, 50 ರಿಂದ 60 ಮಂದಿ ನಿತ್ಯವೂ ಭೇಟಿ ನೀಡುತ್ತಿದ್ದು ಇಕ್ಕಟ್ಟಾದ ಜಾಗದಿಂದ ಸಮಸ್ಯೆ ಉಂಟಾಗಿದೆ’ ಎಂದು ಸುಂಕೇರಿ ನಿವಾಸಿ ವಿಶ್ವನಾಥ ಜೋಶಿ ಹೇಳುತ್ತಾರೆ.
ಮುಂಡಗೋಡ ತಾಲ್ಲೂಕು ಆಸ್ಪತ್ರೆಯ ಭಾರವನ್ನು ಕಡಿಮೆ ಮಾಡುವಲ್ಲಿ, ಇಲ್ಲಿನ ಗಾಂಧಿ ನಗರದಲ್ಲಿನ ಅಂಬೇಡ್ಕರ್ ಭವನದಲ್ಲಿ ಆರೇಳು ತಿಂಗಳ ಹಿಂದೆ ಆರಂಭಗೊಂಡ ‘ನಮ್ಮ ಕ್ಲಿನಿಕ್’ ಯಶಸ್ವಿಯಾಗುತ್ತಿದೆ. ಗಾಂಧಿನಗರ, ನೆಹರೂ ನಗರ, ಕಂಬಾರಗಟ್ಟಿ ಪ್ಲಾಟ್ ಸೇರಿದಂತೆ ವಸತಿನಿಲಯದ ವಿದ್ಯಾರ್ಥಿಗಳಿಗೆ ‘ನಮ್ಮ ಕ್ಲಿನಿಕ್’ನಿಂದ ಉಪಯೋಗವಾಗುತ್ತಿದೆ. ಪ್ರತಿದಿನ ಸರಾಸರಿ 50ಕ್ಕಿಂತ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಆರೋಗ್ಯದ ಕಾಳಜಿ ಕುರಿತು, ವಿಶೇಷ ಕಾರ್ಯಕ್ರಮಗಳನ್ನು ವಸತಿ ನಿಲಯ, ಸಮುದಾಯ ಭವನಗಳಲ್ಲಿ ವೈದ್ಯೆ ಡಾ.ಶ್ರೀದೇವಿ ಹಿರೇಮಠ ಅವರು ಕೈಗೊಳ್ಳುವ ಮೂಲಕ ಬಡವರಿಗೆ ಉತ್ತಮ ಚಿಕಿತ್ಸಾ ನೀಡುವ ಕೇಂದ್ರವಾಗಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ ಚಲವಾದಿ ಹೇಳಿದರು.
‘ನಮ್ಮ ಕ್ಲಿನಿಕ್’ಗೆ ರೋಗಿಗಳು ಬರುವ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಿದೆ. ಔಷಧಿಗಳ ಕೊರತೆಯಿಲ್ಲ. ಸ್ವಂತ ಜಾಗ ಸಿಕ್ಕರೆ, ಸುಸಜ್ಜಿತ ಕಟ್ಟಡವನ್ನು ಕಟ್ಟಿ, ಮತ್ತಷ್ಟು ಸೌಲಭ್ಯಗಳನ್ನು ವಿಸ್ತರಿಸಲು ಯೋಜಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಹೇಳಿದರು.
ಯಲ್ಲಾಪುರ ಪಟ್ಟಣದ ತಟಗಾರ ರಸ್ತೆಯಲ್ಲಿರುವ ಉದ್ಯಮ ನಗರದಲ್ಲಿ ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಯಲ್ಲಿ ಓರ್ವ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯ ಮೂಲಭೂತ ಸೌಕರ್ಯ ಹೊಂದಿದೆ. ಬಾಡಿಗೆ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕ್ಲಿನಿಕ್‌ಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲ ಎಂಬ ದೂರುಗಳಿವೆ.
ಅಂಕೋಲಾ ಪಟ್ಟಣದ ಹೊರ ವಲಯದ ಪುರಲಕ್ಕಿಬೇಣದ ಸಮುದಾಯ ಭವನದಲ್ಲಿ ‘ನಮ್ಮ ಕ್ಲಿನಿಕ್’ ಸ್ಥಾಪನೆಗೊಂಡಿದೆ. ಸುಸಜ್ಜಿತ ಕಟ್ಟಡ, ಕ್ಲಿನಿಕ್‍ನಲ್ಲಿ ಶುಶ್ರೂಷಕಿ ಹಾಗೂ ಪ್ರಯೋಗಾಲಯ ತಜ್ಞರಿದ್ದಾರೆ. ಆದರೆ, ವೈದ್ಯರಿಲ್ಲದೆ ಬಿಕೋ ಎನ್ನುತ್ತಿದೆ.
‘ನಮ್ಮ ಕ್ಲಿನಿಕ್’ಗೆ ವೈದ್ಯರ ಕೊರತೆ ಇರುವುದು ನಿಜ. ಶುಶ್ರೂಷಕಿಯರು, ಇನ್ನಿತರ ಸಿಬ್ಬಂದಿ ಆರೋಗ್ಯ ತಪಾಸಣೆ, ಔಷಧ ವಿತರಣೆ ಕೆಲಸ ನಿಭಾಯಿಸುತ್ತಿದ್ದಾರೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ್ ನಾಯ್ಕ.
ಹೊನ್ನಾವರ ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಜನವರಿಯಲ್ಲಿ ‘ನಮ್ಮ ಕ್ಲಿನಿಕ್’ ಅಸ್ತಿತ್ವಕ್ಕೆ ಬಂದಿದೆ. ಆರಂಭವಾದ ಕೇವಲ ಐದು ತಿಂಗಳುಗಳಲ್ಲೇ ಆಸ್ಪತ್ರೆ ಎರಡು ವೈದ್ಯರನ್ನು ಕಂಡಿದೆ. ಕ್ಲಿನಿಕ್‍ಗೆ ವರ್ಗವಾಗಿ ಬಂದಿದ್ದ ಹಿಂದಿನ ವೈದ್ಯರು ಒಂದೆರಡು ತಿಂಗಳುಗಳಲ್ಲೇ ರಜೆ ಮೇಲೆ ತೆರಳಿದ್ದರಿಂದ ಸ್ನಾತಕೋತ್ತರ ತರಗತಿಯ ವೈದ್ಯ ವಿದ್ಯಾರ್ಥಿಯೊಬ್ಬರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಸದ್ಯ ಇರುವ ವೈದ್ಯರೂ ಇದೇ ಮೇ 15ರಿಂದ ಸೇವೆಯಿಂದ ಬಿಡುಗಡೆ ಕೋರಿದ್ದಾರೆ. ನಿತ್ಯ 50–60 ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಕುಮಟಾ ಪಟ್ಟಣದ ಹೊರವಲಯದ ಚಿತ್ರಿಗಿಯಲ್ಲಿರುವ ‘ನಮ್ಮ ಕ್ಲಿನಿಕ್’ನಲ್ಲಿ ನಿತ್ಯ 30ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಸಜ್ಜಿತ ಖಾಸಗಿ ಕಟ್ಟಡದಲ್ಲಿರುವ ಕ್ಲಿನಿಕ್‍ನಲ್ಲಿ ಒಬ್ಬ ವೈದ್ಯರು ಹಾಗೂ ಇತರೆ ಸಿಬ್ಬಂದಿ ಇದ್ದಾರೆ. ವಾರದಲ್ಲಿ ಎರಡು ದಿನ ಯೋಗ ತರಬೇತಿ ನೀಡಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ ಹೇಳುತ್ತಾರೆ.
ಎರಡೂ ಕಡೆಯಲ್ಲೂ ವೈದ್ಯರಿಲ್ಲ
ಭಟ್ಕಳ ಪಟ್ಟಣದ ಮಣ್ಕುಳಿಯಲ್ಲಿ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿಕೋಡಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ‘ನಮ್ಮ ಕ್ಲಿನಿಕ್’ ಕಾರ್ಯನಿರ್ವಹಿಸುತ್ತಿದೆ. ಎರಡೂ ಕಡೆಯಲ್ಲೂ ವೈದ್ಯರು ಮಾತ್ರ ಲಭ್ಯವಿಲ್ಲ ಎಂಬ ದೂರುಗಳಿವೆ. ಮಣ್ಕುಳಿಯಲ್ಲಿರುವ ‘ನಮ್ಮ ಕ್ಲಿನಿಕ್’ನಲ್ಲಿ ಲಭ್ಯರಿದ್ದ ಎಂ.ಬಿ.ಬಿ.ಎಸ್ ಕಲಿತ ವೈದ್ಯರು ಸ್ನಾತಕೋತ್ತರ ಶಿಕ್ಷಣಕ್ಕಾಗಿ ತೆರಳಿದ್ದು ಖಾಲಿ ಹುದ್ದೆ ಭರ್ತಿ ಆಗಿಲ್ಲ. ಜಾಲಿಯಲ್ಲಿ ಹೊಸದಾಗಿ ಆರಂಭಗೊಂಡ ಕ್ಲಿನಿಕ್‌ಗೆ ಇನ್ನೂ ವೈದ್ಯರು ಆಗಮಿಸಿಲ್ಲ. ಶುಶ್ರೂಷಕಿಯರೇ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ.
ಬಾಡಿಗೆ ಕಟ್ಟಡದಿಂದ ಸ್ಥಳಾಂತರಕ್ಕೆ ಯತ್ನ
ಹಳಿಯಾಳ ಪಟ್ಟಣದ ಹುಲಟ್ಟಿಯಲ್ಲಿ ತೆರೆಯಲಾದ ‘ನಮ್ಮ ಕ್ಲಿನಿಕ್’ ಹಲವು ಜನರಿಗೆ ಸಹಕಾರಿಯಾಗಿದೆ. ಪ್ರತಿನಿತ್ಯ 25 ರಿಂದ 30 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ವೈದ್ಯರ ಕೊರತೆ ಇದೆ. ಇಲ್ಲಿನ ತಾಲ್ಲೂಕಾ ಆಸ್ಪತ್ರೆಯ ವೈದ್ಯರೊಬ್ಬರು ಎರಡು ದಿನಕ್ಕೊಮ್ಮೆ ‘ನಮ್ಮ ಕ್ಲಿನಿಕ್’ಗೆ ಭೇಟಿ ನೀಡುತ್ತಿದ್ದಾರೆ. ಡಿ ದರ್ಜೆಯ ನೌಕರರ ಕೊರತೆಯೂ ಇದೆ.
‘ಪ್ರತಿ ದಿನ ಹೆಚ್ಚಾಗಿ ರಕ್ತದೊತ್ತಡ ಮಧುಮೇಹ ತಪಾಸಣೆಗೆ ರೋಗಿಗಳು ಹೆಚ್ಚಾಗಿ ಬರುತ್ತಿದ್ದು ಮಧುಮೇಹಿಗಳಿಗೆ ವೈದ್ಯರ ಸಲಹೆಯಂತೆ ಇನ್ಸಲಿನ್ ಚುಚ್ಚುಮದ್ದು ನೀಡಲಾಗುತ್ತಿದೆ. ಆಗಾಗ ಚಿಕ್ಕ ಮಕ್ಕಳಿಗೂ ತಾಲ್ಲೂಕಾ ಆಸ್ಪತ್ರೆಯ ಆರೋಗ್ಯ ಶುಶ್ರೂಷಕಿಯರು ಬಂದು ಲಸಿಕೆ ನೀಡುತ್ತಿದ್ದಾರೆ’ ಎಂದು ‘ನಮ್ಮ ಕ್ಲಿನಿಕ್’ನ ಶುಶ್ರೂಷಕಿ ಪ್ರಿಯಾ ತಿಳಿಸಿದರು.
‘ನಮ್ಮ ಕ್ಲಿನಿಕ್’ನ್ನು ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ಪ್ರಯತ್ನ ಸಾಗಿದೆ. 15 ದಿನದೊಳಗೆ ಕಾಯಂ ವೈದ್ಯರು ಡಿ ದರ್ಜೆ ನೌಕರರ ನೇಮಕಕ್ಕೂ ಪ್ರಯತ್ನ ನಡೆಸಲಾಗುವುದು’ ಎಂದು ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ.ಅನಿಲ ಕುಮಾರ ಹೇಳಿದರು.
‘ನಮ್ಮ ಕ್ಲಿನಿಕ್’ನಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸಲು ವೈದ್ಯರ ನೇಮಕಕ್ಕೆ ಪ್ರಯತ್ನ ಸಾಗಿದೆ. ಸರ್ಕಾರದ ಸೂಚನೆ ಆಧರಿಸಿ ಹಂತ ಹಂತವಾಗಿ ಸೌಲಭ್ಯಗಳನ್ನೂ ವಿಸ್ತರಿಸಲಾಗುವುದು.ಡಾ.ನೀರಜ್ ಬಿ.ವಿ, ಜಿಲ್ಲಾ ಆರೋಗ್ಯಾಧಿಕಾರಿ
ಬಡರೋಗಿಗಳ ರಕ್ತದೊತ್ತಡ ಮಧುಮೇಹ ಜ್ವರ ಕೆಮ್ಮು ಸೇರಿದಂತೆ ಇತರ ರೋಗಗಳಿಗೆ ಉಚಿತ ಆರೋಗ್ಯ ಸೌಲಭ್ಯ ಸಿಗುತ್ತಿದೆ. ಕಟ್ಟಡದಲ್ಲಿ ಕಿಟಕಿ ಬಾಗಿಲುಗಳ ದುರಸ್ತಿ ಸ್ವಚ್ಛತೆಗೆ ಸ್ಥಳೀಯರ ಇನ್ನಷ್ಟು ಸಹಕಾರ ಸಿಕ್ಕರೆ ನಮ್ಮ ಕ್ಲಿನಿಕ್ ಮತ್ತಷ್ಟು ಆರೋಗ್ಯಯುತವಾಗಲಿದೆ.ಅಶೋಕ ಚಲವಾದಿ, ಮುಂಡಗೋಡ ಪ.ಪಂ ಸದ
ಅಂಕೋಲಾದಲ್ಲಿನ ‘ನಮ್ಮ ಕ್ಲಿನಿಕ್’ಗೆ ಒಂದು ತಿಂಗಳು ವೈದ್ಯರು ಬಂದರೆ ಪುನಃ ಅವರು ಬರುವುದಿಲ್ಲ. ಈ ಭಾಗದ ಜನರಿಗೆ ಕ್ಲಿನಿಕ್ ಇರುವುದೇ ಮರೆತು ಹೋಗಿದೆ.ವಿನಾಯಕ ನಾಯ್ಕ, ಪುರಲಕ್ಕಿಬೇಣದ ನಿವಾಸಿ
‘ನಮ್ಮ ಕ್ಲಿನಿಕ್’ ಸ್ಥಾಪನೆಯಿಂದಾಗಿ ಸಣ್ಣ ಸಣ್ಣ ಕಾಯಿಲೆಗೂ ಧಾರವಾಡ ಹುಬ್ಬಳ್ಳಿ ಬೆಳಗಾವಿ ಚಿಕಿತ್ಸೆಗೆ ತೆರಳುವುದು ತಪ್ಪಿದ್ದು ಸಮಯ ಮತ್ತು ಹಣ ಉಳಿತಾಯವಾಗುತ್ತಿದೆಫರವಿಜ್ ಅಹ್ಮದ ಬಸರಿಕಟ್ಟಿ, ಹಳಿಯಾಳ ನಿವಾಸಿ
ಪೂರಕ ಮಾಹಿತಿ: ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.