
ಕಾರವಾರ: ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಇಲ್ಲಿನ ಮಾರಿಯಾ ನಗರಕ್ಕೆ ತಲುಪಿದ ಆಂಬುಲೆನ್ಸ್ ಅಲ್ಲಿಂದ ಹೊರಬೀಳಲು ತಾಸುಗಟ್ಟಲೆ ತಡವಾಯಿತು. ತುರ್ತು ಚಿಕಿತ್ಸೆ ಅಗತ್ಯವಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಆತನ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು.
ಹಲವು ದಿನಗಳ ಹಿಂದೆ ನಂದನಗದ್ದಾದ ಬಳಿ ಮನೆಯೊಂದಕ್ಕೆ ಬೆಂಕಿ ತಗುಲಿದಾಗ ಅಗ್ನಿಶಾಮಕ ದಳದ ವಾಹನ ಮುಖ್ಯರಸ್ತೆಗೆ ಬಂದು ಹಲವು ನಿಮಿಷದ ನಂತರ ದುರ್ಘಟನೆ ನಡೆದ ಸ್ಥಳಕ್ಕೆ ಸಾಗಬೇಕಾಯಿತು.
ಇವೆರಡೂ ಘಟನೆಗಳಲ್ಲಿ ತುರ್ತು ನೆರವಿಗೆ ತೊಡಕು ಉಂಟುಮಾಡಿದ್ದು ‘ಇಕ್ಕಟ್ಟಾದ ರಸ್ತೆ’. ನಗರದ ಬಹುತೇಕ ಪ್ರದೇಶಗಳಲ್ಲಿ ಕಿರಿದಾದ ರಸ್ತೆಯ ಕಾರಣಕ್ಕೆ ತುರ್ತು ಸಮಸ್ಯೆಗಳ ವೇಳೆ ವಾಹನಗಳು ಸಾಗಲಾಗದೆ ಜನರು ಪಡಿಪಾಟಲು ಎದುರಿಸುತ್ತಿದ್ದಾರೆ. ಇದು ಕುಟುಂಬಗಳ ನಡುವೆ, ನೆರೆಹೊರೆಯವರ ನಡುವೆ ತಗಾದೆಗೂ ಕಾರಣವಾಗುತ್ತಿದೆ.
‘ಕಾರವಾರ ನಗರದ ಒಳ ಪ್ರದೇಶಗಳಲ್ಲಿನ ರಸ್ತೆಗಳು ಬಹುತೇಕ ಕಡೆ ಇಕ್ಕಟ್ಟಾಗಿವೆ. ನಾಲ್ಕು ಚಕ್ರಗಳ ವಾಹನ ಸಾಗಲು ಪರದಾಡಬೇಕಾಗುತ್ತದೆ. ಆರೋಗ್ಯ ಸಮಸ್ಯೆಗೆ ತುತ್ತಾದವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ವಾಹನ ಏರಿಸಲು ನೂರಾರು ಮೀಟರ್ ದೂರ ಹೊತ್ತು ಸಾಗುವ ಅನಿವಾರ್ಯತೆ ಇದೆ. ಈಚೆಗಷ್ಟೆ ರೋಗಿಯೊಬ್ಬರನ್ನು ಕರೆದೊಯ್ಯಲು ಬಂದ ಆಂಬುಲೆನ್ಸ್ ಚಾಲಕ ವಾಹನ ತಿರುಗಿಸಲು ಸಾಧ್ಯವಾಗದೆ ಕಷ್ಟಪಟ್ಟಿದ್ದನ್ನು ಕಂಡಿದ್ದೇನೆ’ ಎನ್ನುತ್ತಾರೆ ಮಾರಿಯಾ ನಗರ ನಿವಾಸಿ ಎಂ.ವಿ.ಸಂದೀಪ್.
‘ರಸ್ತೆಗಳಿಗೆ ಬಿಡಬೇಕಾದ ಜಾಗದಲ್ಲಿ ಕಾಂಪೌಂಡ್ ಕಟ್ಟಿದವರು ಹಲವರಿದ್ದಾರೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲಾಗದೆ ಜಲಾವೃತ ಸಮಸ್ಯೆಗೂ ಇದೇ ಒತ್ತುವರಿ ಕಾರಣವಾಗುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ನಾಯ್ಕ ದೂರಿದರು.
‘ನಗರ ವ್ಯಾಪ್ತಿಯಲ್ಲಿ ಲೇಔಟ್ ಅನುಮತಿ ಪಡೆಯುವ ಮುನ್ನ 9 ಮೀ ರಸ್ತೆಗೆ ಬಿಡಬೇಕು ಎಂಬ ನಿಯಮವಿದೆ. ಹೊಸದಾಗಿ ಅನಮತಿ ಪಡೆಯುವವರು ನಿಯಮ ಪಾಲಿಸುತ್ತಿದ್ದಾರೆ. ಆದರೆ, ಇಕ್ಕಟ್ಟಾದ ರಸ್ತೆಗಳಿರುವ ಕಡೆಗಳಲ್ಲಿ ಹಳೆ ಕಾಲದ ಮನೆಗಳೇ ಹೆಚ್ಚಿದ್ದು ಅವುಗಳಲ್ಲಿ ರಸ್ತೆಗೆ ಜಾಗ ಬಿಡದವರನ್ನು ಪತ್ತೆ ಹಚ್ಚುವ ಕೆಲಸ ಇನ್ನಷ್ಟೆ ಆಗಬೇಕಿದೆ’ ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕಾರವಾರ ನಗರದಲ್ಲಿ ಒಳ ಪ್ರದೇಶಗಳಲ್ಲಿ ಇಕ್ಕಟ್ಟಾದ ರಸ್ತೆಗಳಲ್ಲಿ ಒತ್ತುವರಿ ಖುಲ್ಲಾಪಡಿಸುವ ಸಂಬಂಧ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲು ಯೋಚಿಸಲಾಗಿದೆಸದಾನಂದ ಸಾಳೆಹಿತ್ತಲ ನಗರಸಭೆ ಎಇಇ
‘ಲೇಔಟ್ ಪರವಾನಗಿ ಪಡೆಯುವ ಮುನ್ನ ಕನಿಷ್ಠ 9 ಮೀ ಅಗಲದ ರಸ್ತೆ ಇರುವಂತೆ ಜಾಗ ಬಿಡಬೇಕು ಎಂಬ ನಿಯಮವಿದೆ. ಈ ನಿಯಮ ಕರಾವಳಿ ಪ್ರದೇಶಕ್ಕೆ ಅನ್ವಯವಾಗಲು ತಾಂತ್ರಿಕ ಸಮಸ್ಯೆಗಳಿವೆ. ಕಾರವಾರ ಸೇರಿದಂತೆ ಕರಾವಳಿ ಭಾಗದಲ್ಲಿ ಬಿನ್‌ಶೇತ್ಗಿ (ಎನ್‌ಎ) ಆದ ಜಾಗದ ಪ್ರಮಾಣ ತೀರಾ ಕಡಿಮೆ ಇದೆ. ಅಲ್ಲದೇ ಸೀಮಿತ ಪ್ರಮಾಣದ ಜಮೀನುಗಳಿದ್ದು ನಿಯಮ ಪಾಲನೆ ಕಷ್ಟ. 9 ಮೀ ಬದಲು ನಗರದ ಒಳ ಪ್ರದೇಶಗಳಲ್ಲಿ 6 ಮೀ. ಅಗಲದ ರಸ್ತೆ ಇರುವಂತೆ ಕರಾವಳಿ ಭಾಗಕ್ಕೆ ವಿನಾಯಿತಿ ನೀಡುವಂತೆ ಈಗಾಗಲೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ’ ಎಂದು ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟದ (ಕ್ರೆಡಾಯ್) ಕಾರವಾರ ಘಟಕದ ಮಾಜಿ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.