
ಹೊನ್ನಾವರ: ’ಸರ್ದಾರ್ ವಲ್ಲಭ ಭಾಯಿ ಪಟೇಲ್ ದೇಶದ ಏಕತೆ ಹಾಗೂ ಸಮಗ್ರತೆ ಸಾಧಿಸಲು ಮಹತ್ವದ ಕೊಡುಗೆ ನೀಡಿದ ಮಹಾನ್ ನಾಯಕ' ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟೇಲ್ ಅವರ ಜನ್ಮದಿನ, ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಬುಧವಾರ ಹೊನ್ನಾವರದಲ್ಲಿ ನಡೆದ 'ಏಕತಾ ನಡಿಗೆ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಕ್ಸಲ್ ಚಟುವಟಿಕೆ ಸೇರಿದಂತೆ ಎಲ್ಲ ರೀತಿಯ ವಿದ್ವಂಸಕ ಕೃತ್ಯಗಳನ್ನು ಮಟ್ಟಹಾಕಬೇಕಿದ್ದು ದೇಶದ ಏಕತೆಗೆ ಭಂಗ ತರಲು ಯತ್ನಸುವ ಯಾವುದೇ ಶಕ್ತಿಗಳಿಗೆ ಆಸ್ಪದ ನೀಡಬಾರದು. ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆ ಮಾಡುವ ಮೂಲಕ ಆತ್ಮನಿರ್ಭರ ಭಾರತ ಕಲ್ಪನೆಯನ್ನು ಸಾಕಾರಗೊಳಿಸಬೇಕು' ಎಂದು ಅವರು ಸಲಹೆ ನೀಡಿದರು.
ಶಾಸಕ ದಿನಕರ ಕೆ. ಶೆಟ್ಟಿ ಮಾತನಾಡಿ, ದೇಶದ ಏಕತೆ ಹಾಗೂ ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಯುವಜನರ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ' ಎಂದು ಹೇಳಿದರು.
ಮಾಜಿ ಸಚಿವ ಶಿವಾನಂದ ನಾಯ್ಕ, ತಹಶೀಲ್ದಾರ ಪ್ರವೀಣ ಕರಾಂಡೆ, ಮಾಜಿ ಶಾಸಕ ಸುನೀಲ ನಾಯ್ಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಜಯ ಕಾಮತ, ಉಪಾಧ್ಯಕ್ಷ ಸುರೇಶ ಹೊನ್ನಾವರ, ಬಿಜೆಪಿ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಬಿಜೆಪಿ ಸಭೆಯಾಗಿ ಮಾರ್ಪಟ್ಟ ಏಕತಾ ನಡಿಗೆ: ಏಕತಾ ನಡಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರೇ ಭಾಗವಹಿಸಿದ್ದರು. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಬಂದಿದ್ದರೂ ಅವರನ್ನು ವೇದಿಕೆಗೆ ಆಹ್ವಾನಿಸಲಿಲ್ಲ.
'ವಂದೇ ಮಾತರಂ' ಗೀತೆ ಹಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಎಸ್‌ಡಿಎಂಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ವಿದ್ಯಾರ್ಥಿಗಳು ಹಾಡಲು ಸಿದ್ಧರಾಗಿ ತಮ್ಮ ಸರದಿಗೆ ಕಾಯುತ್ತಿದ್ದರು. ಆದರೆ ಕೊನೆಗಳಿಗೆಯಲ್ಲಿ ವಿದ್ಯಾರ್ಥಿಗಳ ಬದಲು ಬೇರೊಬ್ಬರು ವಂದೇ ಮಾತರಂ ಗೀತೆ ಹಾಡಿದರು.
'ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಹಾಡುವ ಶೈಲಿಯಲ್ಲೇ ವಂದೇ ಮಾತರಂ ಗೀತೆಯನ್ನು ಹಾಡಬೇಕು' ಎಂದು ಸಂಘದ ಪ್ರಮುಖರೊಬ್ಬರು ಪಟ್ಟು ಹಿಡಿದಿದ್ದರಿಂದ ಬದಲಾವಣೆ ಮಾಡಲಾಯಿತು' ಎಂದು ತಹಶೀಲ್ದಾರ ಕಚೇರಿಯ ಅಧಿಕಾರಿಯೋರ್ವರು ಅಸಹಾಯಕತೆ ವ್ಯಕ್ತಪಡಿಸಿದರು.
'ಸರ್ಕಾರಿ ಕಾರ್ಯಕ್ರಮ' ಎಂದು ಅಧಿಕೃತವಾಗಿ ತಿಳಿಸಿದ್ದ ಅಧಿಕಾರಿಗಳಿಗೂ ಪ್ರಸ್ತುತ ಬೆಳವಣಿಗೆ ಇರಿಸುಮುರುಸಾಗುವಂತೆ ಮಾಡಿತು.
ಕೊಡೆ ಹಿಡಿದು ನಿಂತ ಜನರು: ವೇದಿಕೆಯಲ್ಲಿ ಕುಳಿತವರಿಗೆ ಮಾತ್ರ ಪೆಂಡಾಲ್ ಹೊದಿಸಲಾಗಿತ್ತು. ಸಂಘಟಕರ ಒತ್ತಾಯದ ಆಹ್ವಾನದ ಮೇರೆಗೆ ಆಗಮಿಸಿದ್ದ ವಿದ್ಯಾರ್ಥಿಗಳು, ಸ್ವ ಸಹಾಯ ಸಂಘಟನೆಗಳ ಸದಸ್ಯರು ಸೇರಿದಂತೆ ಸೇರಿದ್ದ ಎಲ್ಲ ಜನರು ವೇದಿಕೆಯ ಮುಂಭಾಗದಲ್ಲಿ ಬಿರುಬಿಸಿಲಲ್ಲಿ ಬಸವಳಿದರು. ಸಭಾ ಕಾರ್ಯಕ್ರಮದ ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಏಕತಾ ನಡಿಗೆ ನಡೆಯಿತು.
ವಿವಾದ ಸೃಷ್ಟಿಸಿದ ಕಾಗೇರಿ ಹೇಳಿಕೆ: ನಾನು ಇತಿಹಾಸ ಕೆದಕಲು ಹೋಗುವುದಿಲ್ಲ. ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು. ಬ್ರಿಟಿಷರನ್ನು ಸ್ವಾಗತಿಸಲು ರಚಿಸಿದ 'ಜನಗಣಮನ'ವನ್ನು ರಾಷ್ಟ್ರಗೀತೆ ಮಾಡಲಾಯಿತು' ಎಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೇಳಿಕೆ ಹಲವರು ಹುಬ್ಬೇರಿಸುವಂತೆ ಮಾಡಿತು.
'ನಾವು ದಿನನಿತ್ಯ ಜನಮನಗಣ ರಾಷ್ಟ್ರಗೀತೆಯನ್ನು ಅಭಿಮಾನದಿಂದ ಹಾಡುತ್ತೇವೆ. ನಮ್ಮನ್ನು ಕಾರ್ಯಕ್ರಮಕ್ಕೆ ಕರೆಸಿ ನಮ್ಮಲ್ಲಿ ರಾಷ್ಟ್ರಗೀತೆಯ ಕುರಿತು ಅನುಮಾನ ಹುಟ್ಟಿಸಿದ್ದಾರೆ' ಎಂದು ಎಸ್‌ಡಿಎಂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.