ADVERTISEMENT

ಐ.ಎಫ್.ಎಸ್ ಪರೀಕ್ಷೆಯಲ್ಲಿ 62ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 13:51 IST
Last Updated 29 ಜೂನ್ 2022, 13:51 IST
ಎಸ್.ನವೀನ ಕುಮಾರ ಹೆಗಡೆ
ಎಸ್.ನವೀನ ಕುಮಾರ ಹೆಗಡೆ   

ಕಾರವಾರ: ಕೇಂದ್ರ ನಾಗರಿಕ ಸೇವಾ ಆಯೋಗವು (ಯು.ಪಿ.ಎಸ್.ಸಿ) ಹಮ್ಮಿಕೊಂಡಿದ್ದ ಭಾರತೀಯ ಅರಣ್ಯ ಸೇವೆಯ (ಐ.ಎಫ್.ಎಸ್) ಪರೀಕ್ಷೆಯಲ್ಲಿ, ಅಂಕೋಲಾ ತಾಲ್ಲೂಕಿನ ಅಚವೆಯ ಎಸ್.ನವೀನ ಕುಮಾರ ಹೆಗಡೆ 62ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

‘ಅರಣ್ಯದಿಂದ ಕೂಡಿರುವ ಉತ್ತರ ಕನ್ನಡದ ಪರಿಸರವು, ನಾನು ಅರಣ್ಯ ಸೇವೆಗೆ ಸೇರಬೇಕು ಎಂದು ಪ್ರೇರೇಪಿಸಿತು. ನನ್ನ ಎತ್ತರವು ಕಡಿಮೆಯಾಗಿದ್ದ ಕಾರಣದಿಂದ ಈ ಮೊದಲು ಪರೀಕ್ಷೆ ಬರೆಯಲು ಅರ್ಹತೆ ಇರಲಿಲ್ಲ. ಆದರೆ, ಯು.ಪಿ.ಎಸ್.ಸಿ ಈಚೆಗೆ ಈ ನಿಯಮದಿಂದ ವಿನಾಯಿತಿ ನೀಡಿದೆ. ಇದು ಅನುಕೂಲವಾಯಿತು’ ಎಂದು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

ಅಚವೆ ಸಮೀಪದ ಮೋತಿಗುಡ್ಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಳವಳ್ಳಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕುಮಟಾದ ಮೂರೂರು ಪ್ರಗತಿ ವಿದ್ಯಾಮಂದಿರದಲ್ಲಿ ಪ್ರೌಢಶಾಲೆ, ಬಳಿಕ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪಿ.ಯು ಅಧ್ಯಯನ ಮಾಡಿದ್ದರು. ನಂತರ, ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು.

ADVERTISEMENT

‘ಯು.ಪಿ.ಎಸ್‌.ಸಿ ಪರೀಕ್ಷೆಗೆ 2017ರಲ್ಲಿ ದೆಹಲಿಯಲ್ಲಿ ತರಬೇತಿ ಪಡೆದಿದ್ದೆ. ಐದು ಬಾರಿ ನಾಗರಿಕ ಸೇವಾ ‍ಪರೀಕ್ಷೆಗಳನ್ನು ಬರೆದಿದ್ದೇನೆ. ಮೊದಲ ಪ್ರಯತ್ನದಲ್ಲಿ ಐ.ಎಫ್.ಎಸ್ ಉತ್ತೀರ್ಣನಾಗಿದ್ದೇನೆ’ ಎಂದು ತಿಳಿಸಿದರು.

ಅವರ ತಂದೆ ಸೀತಾರಾಮ ಹೆಗಡೆ ಟೇಲರಿಂಗ್ ಮತ್ತು ಕೃಷಿ ಮಾಡುತ್ತಿದ್ದು, ತಾಯಿ ಲಲಿತಾ ಹೆಗಡೆ ಗೃಹಿಣಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.