ADVERTISEMENT

ಕಾರವಾರ | ಬಾಣಂತಿ, ಶಿಶು ಸಂಪೂರ್ಣ ಗುಣಮುಖ

ಜಿಲ್ಲೆಯಲ್ಲಿ 51 ಜನರಿಗೆ ಕೋವಿಡ್ ಖಚಿತ, 67 ಮಂದಿ ಸೋಂಕುಮುಕ್ತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 14:33 IST
Last Updated 1 ಆಗಸ್ಟ್ 2020, 14:33 IST
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ   

ಕಾರವಾರ: ಜಿಲ್ಲೆಯಲ್ಲಿ 51 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಒಟ್ಟು 67 ಮಂದಿ ಸೋಂಕುಮುಕ್ತರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದರು.

ಕಾರವಾರ ತಾಲ್ಲೂಕಿನ 27 ವರ್ಷದ ಬಾಣಂತಿ ಹಾಗೂ ಅವರ ನವಜಾತ ಶಿಶು ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಗರ್ಭಿಣಿಯಾಗಿದ್ದಾಗ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್‌ ವಾರ್ಡ್‌ಗೆ ದಾಖಲಿಸಿ ವೈದ್ಯರು ಜುಲೈ 25ರಂದು ಶಸ್ತ್ರಕ್ರಿಯೆಯ ಮೂಲಕ ಹೆರಿಗೆ ಮಾಡಿಸಿ ಚಿಕಿತ್ಸೆ ಮುಂದುವರಿಸಿದ್ದರು. ಇಬ್ಬರ ಗಂಟಲುದ್ರವದ ಪರೀಕ್ಷೆಯೂ ಕೋವಿಡ್‌ಗೆ ನೆಗೆಟಿವ್ ಬಂದಿರುವ ಕಾರಣ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಹೊಸದಾಗಿ ಸೋಂಕಿತರಲ್ಲಿ ಕುಮಟಾ ತಾಲ್ಲೂಕಿನಲ್ಲಿ 94 ವರ್ಷದ ಮಹಿಳೆಯೂ ಸೇರಿದಂತೆ 14, ಹಳಿಯಾಳ ಹಾಗೂ ದಾಂಡೇಲಿ ತಾಲ್ಲೂಕುಗಳಲ್ಲಿ ಒಟ್ಟು 13 ಜನರು ಸೇರಿದ್ದಾರೆ. ಉಳಿದಂತೆ, ಕಾರವಾರ ಮತ್ತು ಮುಂಡಗೋಡ ತಾಲ್ಲೂಕುಗಳಲ್ಲಿ ತಲಾ ಐವರು, ಜೊಯಿಡಾ ತಾಲ್ಲೂಕಿನಲ್ಲಿ ನಾಲ್ವರು, ಭಟ್ಕಳ ತಾಲ್ಲೂಕಿನಲ್ಲಿ ಮೂವರು, ಅಂಕೋಲಾ, ಶಿರಸಿ, ಯಲ್ಲಾಪುರ ತಾಲ್ಲೂಕುಗಳಲ್ಲಿ ತಲಾ ಇಬ್ಬರು ಮತ್ತು ಹೊನ್ನಾವರ ತಾಲ್ಲೂಕಿನಲ್ಲಿ ಒಬ್ಬರು ಕೋವಿಡ್ ಪೀಡಿತರಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 79 ಮಂದಿಗೆ ಮನೆಯಲ್ಲೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

14 ಜನರಿಗೆ ಜ್ವರದ (ಐ.ಎಲ್.ಐ) ಲಕ್ಷಣಗಳಿವೆ. ಒಬ್ಬರಿಗೆ ಉಸಿರಾಟದ ತೀವ್ರ ಸಮಸ್ಯೆ (ಎಸ್.ಎ.ಆರ್.ಐ) ಕಂಡುಬಂದಿದೆ. ಎಂಟು ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. 21 ಜನರು ಸೋಂಕಿತರ ಸಂಪರ್ಕದಿಂದ ಕೋವಿಡ್ ರೋಗಿಗಳಾಗಿದ್ದಾರೆ. ಏಳು ಮಂದಿ ದೇಶದ ವಿವಿಧ ಊರುಗಳಿಗೆ ಪ್ರಯಾಣಿಸಿದ್ದರೆ, ಒಬ್ಬರು ವಿದೇಶದಿಂದ ಮರಳಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ಮಾಹಿತಿ ನೀಡಿದೆ.

ಹೋಂ ಕ್ವಾರಂಟೈನ್ ಉಲ್ಲಂಘನೆ:

ಹೋಂ ಕ್ವಾರೈಂಟನ್ ನಿಯಮ ಉಲ್ಲಂಘಿಸಿದ ತಾಯಿ, ಮಗನ ವಿರುದ್ಧ ಕುಮಟಾ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

‘ಪಟ್ಟಣದ ಚಿತ್ರಿಗಿಯ ಜಯಶ್ರೀ ಪುರುಷೋತ್ತಮ ನಾಯಕ ಹಾಗೂ ಅವರ ಮಗ ಸುಧೀರ ಪುರುಷೋತ್ತಮ ನಾಯಕ ಅವರು ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. 14 ದಿವಸ ಹೋಂ ಕ್ವಾರಂಟೈನ್‌ನಲ್ಲಿ ಇರಲು ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಓಡಾಡಿ ಕಾನೂನು ‌ಉಲ್ಲಂಘಿಸಿದ್ದಾರೆ’ ಎಂದು ಕುಮಟಾ ಹೋಬಳಿ ಕಂದಾಯ ನಿರೀಕ್ಷಕ ಪ್ರಶಾಂತ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

* ಒಟ್ಟು ಸೋಂಕಿತರು‌-2,170

* ಸಕ್ರಿಯ ಪ್ರಕರಣಗಳು-728

*ಗುಣಮುಖರಾದವರು-‌1,418

* ಮೃತರು-24

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.