ADVERTISEMENT

ಪ್ರತಿಭಟನೆಗಷ್ಟೇ ಸೀಮಿತವಾದ ಬಂದ್‌

ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ; ಮರಾಠಾ ಅಭಿವೃದ್ಧಿ ನಿಗಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 11:52 IST
Last Updated 5 ಡಿಸೆಂಬರ್ 2020, 11:52 IST
ಕಾರವಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು
ಕಾರವಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು   

ಕಾರವಾರ: ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗಿ ಜನಜೀವನ ಎಂದಿನಂತೆ ಸಾಗಿತು.

ನಗರದ ಸುಭಾಷ್ ವೃತ್ತದ ಬಳಿ ಸೇರಿದ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಕಾರ್ಯಕರ್ತರು, ಸರ್ಕಾರದ ತೀರ್ಮಾನವನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ, ‘ಮರಾಠಾ ಅಭಿವೃದ್ಧಿ ನಿಗಮದ ರಚನೆಯು ಅಪ್ಪಟ ರಾಜಕೀಯ ತಂತ್ರಗಾರಿಕೆಯಾಗಿದೆ. ಒಂದು ಭಾಷಿಕ ಸಮುದಾಯವನ್ನು ಅನೈತಿಕ ಮತ್ತು ಅಸಾಂವಿಧಾನಿಕವಾಗಿ ಓಲೈಸುವ ಕುತಂತ್ರವಾಗಿದೆ’ ಎಂದು ದೂರಿದರು.

ADVERTISEMENT

‘ರಾಜ್ಯದ ಗಡಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ವೈಷಮ್ಯ ಹುಟ್ಟಿಸುವ ಕೆಲಸವನ್ನು ಎಂ.ಇ.ಎಸ್, ಶಿವಸೇನೆ, ಎನ್.ಸಿ.ಪಿ ಮುಂತಾದ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ದಶಕಗಳಿಂದಲೂ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ನಿಗಮ ರಚನೆಯ ಔಚಿತ್ಯವಾದರೂ ಏನಿತ್ತು’ ಎಂದು ಪ್ರಶ್ನಿಸಿದರು.

‘ಈ ನಿಗಮ ರಚನೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನ್ನಡಪರ ಸಂಘಟನೆಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಬೇಕಿತ್ತು. ಆದರೆ, ಅವರನ್ನೂ ಒಳಗೊಂಡಂತೆ ಸರ್ಕಾರದಲ್ಲಿ ಇರುವವರು ಹುಂಬತನದಿಂದ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈ ನಿಗಮ ರಚನೆಯನ್ನು ಕೈಬಿಡಬೇಕು. ಕನ್ನಡಪರ ಕಾರ್ಯಕರ್ತರ ಬಗ್ಗೆ ಲಘುವಾಗಿ ಮಾತನಾಡುವ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹತ್ತಾರು ಕಾರ್ಯಕರ್ತರು ಭಾಗವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.