ADVERTISEMENT

ಕಾರವಾರ | ನಿಲ್ದಾಣಕ್ಕೆ ಆಟೊ ಬಂದರೂ ಪ್ರಯಾಣಿಕರಿಲ್ಲ!

ಲಾಕ್‌ಡೌನ್ ಸಡಿಲಿಕೆ ಬಳಿಕ ನಗರದಲ್ಲಿ ಬೆರಳೆಣಿಕೆಯಷ್ಟು ರಿಕ್ಷಾಗಳ ಸಂಚಾರ

ಸದಾಶಿವ ಎಂ.ಎಸ್‌.
Published 20 ಮೇ 2020, 19:45 IST
Last Updated 20 ಮೇ 2020, 19:45 IST
ಕಾರವಾರದಲ್ಲಿ ಆಟೊ ರಿಕ್ಷಾ ಚಾಲಕರು ಪ್ರಯಾಣಿಕರಿಗೆ ಕಾಯುತ್ತಿರುವುದು – ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್
ಕಾರವಾರದಲ್ಲಿ ಆಟೊ ರಿಕ್ಷಾ ಚಾಲಕರು ಪ್ರಯಾಣಿಕರಿಗೆ ಕಾಯುತ್ತಿರುವುದು – ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್   

ಕಾರವಾರ:‘ನಮ್ಮ ಜೀವನ ಆಟೊ ಚಾಲನೆಯಿಂದಲೇ ಆಗಬೇಕು ಸರ್. ಕೊರೊನಾ ವೈರಸ್ ಹಾವಳಿಯಿಂದ ದುಡಿಮೆಯೇ ಇಲ್ಲ. ಮಾಡಿದ ಸಾಲದ ಕಂತನ್ನು ಹೇಗೆ ತುಂಬುವುದು, ಕುಟುಂಬದ ನಿರ್ವಹಣೆ ಹೇಗೆ ಎಂಬ ಚಿಂತೆ ಮನಸ್ಸು ತುಂಬಿಕೊಂಡಿದೆ...’

ನಗರದ ಆಟೊರಿಕ್ಷಾ ಚಾಲಕ ವಿನಯಕುಮಾರ್ ಹೀಗೆ ಹೇಳುತ್ತಕಣ್ಣೀರು ತುಂಬಿಕೊಂಡರು. ಲಾಕ್‌ಡೌನ್‌ ನಿಯಮ ಸಡಿಲಿಸಿದ ಕಾರಣ ಅವರುತಮ್ಮ ಆಟೊದೊಂದಿಗೆ ನಿಲ್ದಾಣಕ್ಕೆ ಎರಡು ದಿನಗಳಿಂದ ಬರುತ್ತಿದ್ದಾರೆ. ಆದರೆ, ನಗರಕ್ಕೆ ಬಸ್ ಹಾಗೂ ರೈಲುಗಳ ಸಂಚಾರ ಎಂದಿನಂತೆ ಶುರುವಾಗದ ಕಾರಣ ಪ್ರಯಾಣಿಕರೇಸಿಗುತ್ತಿಲ್ಲ.

‘ಸಣ್ಣ ನಗರವಾಗಿರುವ ಕಾರವಾರದಲ್ಲಿ ನಮಗೆ ಮನೆ ಮನೆಗಳಿಗೆ ಬಾಡಿಗೆಗೆ ಕರೆಯುವವರು ಕಡಿಮೆ.ಬಹುತೇಕಆಟೊಗಳು ಕೆಲವು ಬಡಾವಣೆಗಳಿಗೆ ದಿನಪೂರ್ತಿಸಂಚರಿಸುತ್ತವೆ (ರೂಟ್ ಆಟೊ). ದಾರಿ ಮಧ್ಯೆ ಸಿಗುವ ಪ್ರಯಾಣಿಕರು ₹ 5, ₹ 10ಯಂತೆಹಣ ನೀಡುತ್ತಾರೆ. ಇಡೀದಿನ ಸಂಚರಿಸಿದರೆ ₹ 300, ₹ 400 ಸಿಗುತ್ತದೆ. ಆದರೆ, ಎರಡು ತಿಂಗಳಿನಿಂದ ಆಟೊ ರಸ್ತೆಗೆ ಇಳಿದಿಲ್ಲ’ ಎನ್ನುತ್ತ ಬೇಸರಿಸಿದರು.

ADVERTISEMENT

‘ನಮ್ಮ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಆಟೊ ರಿಕ್ಷಾಗಳಿವೆ. ಲಾಕ್‌ಡೌನ್‌ ಸಡಿಲಿಕೆ ಆದ ಬಳಿಕ ಕೆಲವೇ ಚಾಲಕರು ಆಟೊ ನಿಲ್ದಾಣಕ್ಕೆ ಬಂದಿದ್ದಾರೆ. ನಗರದಲ್ಲಿ ಸಂಚರಿಸಲು ಜನರೇ ಇಲ್ಲದ ಮೇಲೆ ಆಟೊಗಳು ಬಂದು ಏನು ಪ್ರಯೋಜನ’ ಎಂದು ಪ್ರಶ್ನಿಸುತ್ತಾರೆಉತ್ತರಕನ್ನಡ ಜಿಲ್ಲಾ ಆಟೊರಿಕ್ಷಾ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ದಿಲೀಪ ಅರ್ಗೇಕರ್.

‘ಕಾರವಾರ ಮತ್ತು ಅಂಕೋಲಾದಲ್ಲಿ ಸುಮಾರು 1,300 ಆಟೊಗಳಿವೆ. ಅವುಗಳ ಪೈಕಿ 100ರಿಂದ 150 ಆಟೊಗಳು ಮಾತ್ರ ರಸ್ತೆಗಿಳಿದಿವೆ. ಅವರಿಗೂ ದಿನಕ್ಕೊಬ್ಬ ಪ್ರಯಾಣಿಕ ಸಿಕ್ಕಿದರೂ ಅದೃಷ್ಟ ಎಂಬಂತಾಗಿದೆ. ನಗರದ ಮೂಲೆಯಿಂದ ಕೇಂದ್ರ ಭಾಗಕ್ಕೆ ಮೀನು ಮಾರಾಟಗಾರ ಮಹಿಳೆಯರು, ಕೂಲಿ ಕಾರ್ಮಿಕರು, ಬಡವರು ರೂಟ್ ಆಟೊದಲ್ಲಿ ಬರುತ್ತಿದ್ದರು. ಆದರೆ, ಈಗ ಅವರ ಬಳಿಯೂ ಹಣದ ಕೊರತೆಯಾಗಿರುವ ಕಾರಣ ಬಹುತೇಕರು ನಡೆದುಕೊಂಡೇ ಹೋಗುತ್ತಿದ್ದಾರೆ. ಹಾಗಾಗಿ ಆಟೊರಿಕ್ಷಾ ಚಾಲಕರಿಗೂ ಆದಾಯವಿಲ್ಲ’ ಎಂದು ವಿವರಿಸಿದರು.

‘ಹಲವರು ಸಾಲ ಮಾಡಿಕೊಂಡಿದ್ದಾರೆ. ಮಕ್ಕಳು, ತಂಗಿ, ತಮ್ಮನ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ತಂದೆ, ತಾಯಿ ಇದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿರುವವರು ಈಗ ಆದಾಯವಿಲ್ಲದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇನ್ನೆಷ್ಟು ದಿನ ಈ ರೀತಿಯ ದಿನಗಳನ್ನು ಎದುರಿಸಬೇಕೋ ತಿಳಿಯುತ್ತಿಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.

ನೆರವಿಗೆ ಧಾವಿಸಲಿ:‘ರಾಜ್ಯ ಸರ್ಕಾರ ಆಟೊರಿಕ್ಷಾ ಚಾಲಕರಿಗೆ ಘೋಷಿಸಿರುವ ₹ 5,000 ಸಹಾಯಧನವು ಆದಷ್ಟು ಬೇಗ ಸಿಗುವಂತೆ ಮಾಡಿದರೆ ಸಹಾಯವಾಗುತ್ತದೆ. ಕಾರವಾರ ಶಾಸಕಿ ರೂಪಾಲಿ ನಾಯ್ಕ ಜೀವನಾವಶ್ಯಕ ವಸ್ತುಗಳ ಪೊಟ್ಟಣಗಳನ್ನು ನೀಡಿದ್ದಾರೆ. ಇವೆಲ್ಲ ತಾತ್ಕಾಲಿಕವಾದರೂ ತುಸು ನೆಮ್ಮದಿ ತಂದಿದೆ’ ಎಂದು ದಿಲೀಪ ಅರ್ಗೇಕರ ಹೇಳಿದರು.

‘ಇದೇ ಮಾದರಿಯಲ್ಲಿ ಜಿಲ್ಲೆಯಲ್ಲಿರುವ ಹಲವು ಮಾಜಿ ಜನಪ್ರತಿನಿಧಿಗಳು, ಸಮಾಜದ ಮುಖಂಡರು ಆಟೊ ಚಾಲಕರ ನೆರವಿಗೆ ಬಂದರೆ ಸಾಕಷ್ಟು ಅನುಕೂಲವಾಗುತ್ತದೆ’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.