ADVERTISEMENT

‘ಸಾಮಾಜಿಕ ಕಳಕಳಿಗೆ ಅನ್ವರ್ಥಕ ಎನ್‌ಎಸ್‌ಎಸ್’

ಜಿಲ್ಲಾ ಮಟ್ಟದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 12:35 IST
Last Updated 27 ಸೆಪ್ಟೆಂಬರ್ 2019, 12:35 IST
ಶಿರಸಿಯಲ್ಲಿ ನಡೆದ ಎನ್‌.ಎಸ್‌.ಎಸ್ ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿದರು
ಶಿರಸಿಯಲ್ಲಿ ನಡೆದ ಎನ್‌.ಎಸ್‌.ಎಸ್ ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿದರು   

ಶಿರಸಿ: ರಾಷ್ಟ್ರೀಯ ಸೇವಾ ಯೋಜನಾ (ಎನ್.ಎಸ್.ಎಸ್) ಘಟಕಗಳು ಸಾಮಾಜಿಕ ಕಳಕಳಿಗೆ ಅನ್ವರ್ಥಕವಾಗಿವೆ. ಇವುಗಳ ಸಾಮಾಜಿಕ ಚಿಂತನೆ ನಿರಂತರವಾಗಿ ನಡೆಯಬೇಕು ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ದೇಶವು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸಬಲವಾಗಲು ಎನ್‌.ಎಸ್‌.ಎಸ್ ಕೊಡುಗೆ ದೊಡ್ಡದಿದೆ. ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರ ಕಾರ್ಯ ಶ್ಲಾಘನೀಯ ಎಂದರು.

ಎನ್‌.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ.ದಳಪತಿ ಮಾತನಾಡಿ, ‘ರಾಷ್ಟ್ರದಾದ್ಯಂತ ಎನ್.ಎಸ್.ಎಸ್.ನಲ್ಲಿ ಆರು ಕೋಟಿಗೂ ಅಧಿಕ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ. ಪ್ರೌಢಶಾಲಾ ಹಂತದಲ್ಲೂ ಈ ಘಟಕ ಕಾರ್ಯ ನಡೆಸುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು, ರಚನಾತ್ಮಕ ಕಾರ್ಯದಲ್ಲಿ ತೊಡಗಲು ಇದು ಪೂರಕವಾಗಿದೆ’ ಎಂದರು.

ADVERTISEMENT

ಕಾಲೇಜಿನ ಪ್ರಾಚಾರ್ಯ ಜನಾರ್ದನ ಭಟ್ಟ, ಎನ್.ಎಸ್.ಎಸ್ ಅಧಿಕಾರಿ ಆರ್.ವೈ.ಖಾನ್ ಇದ್ದರು. ರಾಷ್ಟ್ರ ನಿರ್ಮಾಣದಲ್ಲಿ ಎನ್.ಎಸ್.ಎಸ್ ಪಾತ್ರದ ಕುರಿತು ಜಿಲ್ಲಾ ನೋಡಲ್ ಅಧಿಕಾರಿ ಜಿ.ಟಿ.ಭಟ್ಟ ಹಾಗೂ ಪದವಿ ಕಾಲೇಜುಗಳಲ್ಲಿ ಎನ್.ಎಸ್.ಎಸ್ ಅನುಷ್ಠಾನ ಕುರಿತು ಧಾರವಾಡ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಿ.ನ್ಯಾಮತಿ ಮಾಹಿತಿ ನೀಡಿದರು. ಸತೀಶ ನಾಯ್ಕ ಸ್ವಾಗತಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರಾಷ್ಟ್ರೀಯ ಸೇವಾ ಯೋಜನೆ ಕೋಶಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.