ADVERTISEMENT

ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ ಸೂಚನೆ

ಕೊರೊನಾ ವೈರಸ್ ತಡೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಿ: ಕೆ.ಪಿ.ಮೋಹನರಾಜ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 13:51 IST
Last Updated 13 ಏಪ್ರಿಲ್ 2020, 13:51 IST
ಕಾರವಾರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ಹಮ್ಮಿಕೊಂಡರು
ಕಾರವಾರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ಹಮ್ಮಿಕೊಂಡರು   

ಕಾರವಾರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲೆ ಎಲ್ಲ ಹಂತದ ಅಧಿಕಾರಿಗಳೂ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು.ಸ್ಥಳೀಯ ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರಸ್ಥಾನಗಳಲ್ಲೇ ಇದ್ದು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿಸೋಮವಾರ ಎಲ್ಲ ಉಪ ವಿಭಾಗಾಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೊಸಂವಾದ ನಡೆಸಿ ಮಾತನಾಡಿದರು.

‘ಲಾಕ್‌ಡೌನ್ ಅನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಿದ್ದೀರಿ. ಮುಂದಿನ ಅವಧಿಗೂ ಚೆನ್ನಾಗಿ ನಿಭಾಯಿಸಬೇಕು. ಇದಕ್ಕೆ ಸರಿಯಾದ ಕಾರ್ಯ ಯೋಜನೆಗಳನ್ನು ರೂಪಿಸಿಕೊಳ್ಳಬೇಕು’ ಎಂದುಸೂಚಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಮಾತನಾಡಿ, ‘ಗ್ರಾಮಮಟ್ಟದ ಆರೋಗ್ಯ ತಂಡಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯವಾಗಬೇಕು. ಆಶಾ ಕಾರ್ಯಕರ್ತೆಯರು ದೂರವಾಣಿ ಕರೆ ಮಾಡಿ ಮಾಹಿತಿ ಸಂಗ್ರಹಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಮುಂದಿನ 15 ದಿನಗಳಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರನ್ನು ಚೆಕ್ ಪೋಸ್ಟ್‌ಗಳಲ್ಲಿ ತಡೆ ಹಿಡಿಯಿರಿ. ಒಂದು ವೇಳೆ ಜನರು ಬಂದಿದ್ದೇಆದಲ್ಲಿ ಅವರಿಗೆ ಪರ್ಯಾಯ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ತಹಸೀಲ್ದಾರರು ಸಹಕಾರ ನೀಡಿ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಎಂದುಸ್ಥಳಗಳನ್ನು ಗುರುತಿಸಿ, ಸಮೀಕ್ಷೆ ಮಾಡಿಕೊಳ್ಳಬೇಕು’ ಎಂದರು.

‘ಕೆಂಪು ವಲಯದಲ್ಲಿ ಪ್ರತಿ ದಿನ, ಕಿತ್ತಳೆ ವಲಯದಲ್ಲಿ ವಾರದಲ್ಲಿ ಎರಡು ಬಾರಿ ಮತ್ತು ಹಸಿರು ವಲಯದಲ್ಲಿ ವಾರಕೊಮ್ಮೆ ಸಮೀಕ್ಷೆ ನಡೆಸಬೇಕು. ಯಾವುದೇ ರೀತಿಯ ಸಾವುಗಳು ಸಂಭವಿಸಿದರೂ ಅದರ ಮಾಹಿತಿ ತಹಶೀಲ್ದಾರ ಬಳಿಯಿರಬಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಅಧಿಕಾರಿ ಮೊಹಮ್ಮದ್ರೋಶನ್, ಕಾರವಾರ ಉಪ ವಿಭಾಗಾಧಿಕಾರಿ ಪ್ರಿಯಾಂಗಾ.ಎಂ, ಸರ್ವೇಕ್ಷಣಾಧಿಕಾರಿ ಡಾ.ವಿನೋದ ಭೂತೆಇದ್ದರು.

ಕಡ್ಡಾಯ ತಪಾಸಣೆಗೆ ಸೂಚನೆ:ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವವರನ್ನು, ಈ ಜಿಲ್ಲೆಯಿಂದ ಬೇರೆಡೆಗೆ ಹೋಗಿ ಬರುವವರನ್ನು ಕಡ್ಡಾಯವಾಗಿ ಸಮೀಪದ ಜ್ವರ ತಪಾಸಣಾ ಕೇಂದ್ರದಲ್ಲಿ ತಪಾಸಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೂಚಿಸಿದ್ದಾರೆ.

ತಪಾಸಣೆ ಮಾಡಿದ ಬಳಿಕ ಅವರ ಕೈಗೆ ಕ್ವಾರಂಟೈನ್ ಮುದ್ರೆಯೊತ್ತಬೇಕು. ಅವರನ್ನು 14 ದಿನಗಳ ಗೃಹ ಕ್ವಾರಂಟೈನ್‌ಗೆ ಒಳಪಡಿಸಬೇಕು. ಒಂದುವೇಳೆ, ಇದಕ್ಕೆ ಒಪ್ಪದಿದ್ದರೆ ಸರ್ಕಾರಿ ಕ್ವಾರಂಟೈನ್ ಕೇಂದ್ರಕ್ಕೆ ಒಪ್ಪಿಸಬೇಕು ಎಂದು ಆದೇಶಿಸಿದ್ದಾರೆ.

ಜಿಲ್ಲೆಯ ಗಡಿಭಾಗದ ತಾಲ್ಲೂಕುಗಳಲ್ಲಿರುವ ಚೆಕ್‌‍ಪೋಸ್ಟ್‌ಗಳಲ್ಲಿ ಬೇರೆಡೆಯಿಂದ ಬರುವವರ ವಿವರ,ಪಾಸ್ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಬೇಕು. ಅದನ್ನು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿದಿನ ಕಳುಹಿಸಲೂ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.