ADVERTISEMENT

ನೆನಪಿನ ಪುಟದತ್ತ ಹಳೆಯ ಎಸ್‌ಪಿ ಕಚೇರಿ

ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಶತಮಾನದ ಕಟ್ಟಡ ತೆರವು ಆರಂಭ

ಸದಾಶಿವ ಎಂ.ಎಸ್‌.
Published 21 ಏಪ್ರಿಲ್ 2019, 19:30 IST
Last Updated 21 ಏಪ್ರಿಲ್ 2019, 19:30 IST
ಕಾರವಾರದ ಹಳೆಯ ಎಸ್‌ಪಿ ಕಚೇರಿಯ ತೆರವು ಕಾರ್ಯ ಭರದಿಂದ ಸಾಗಿದೆ
ಕಾರವಾರದ ಹಳೆಯ ಎಸ್‌ಪಿ ಕಚೇರಿಯ ತೆರವು ಕಾರ್ಯ ಭರದಿಂದ ಸಾಗಿದೆ   

ಕಾರವಾರ:ಕಡಲತೀರದ ಈ ಸುಂದರ ನಗರದಲ್ಲಿ ಹತ್ತಾರು ಕಟ್ಟಡಗಳು ಶತಮಾನಕ್ಕೂ ಹೆಚ್ಚು ಕಾಲ ತಲೆಯೆತ್ತಿ ನಿಂತಿವೆ. ಬ್ರಿಟಿಷರ ಕಾಲ ವಾಸ್ತು ವಿನ್ಯಾಸ, ಕಲ್ಲಿನ ಗೋಡೆಗಳು, ಚಾವಣಿಗೆ ಹೆಂಚಿನ ಹೊದಿಕೆ ಆಕರ್ಷಕವಾಗಿದ್ದವು. ಆದರೆ, ಕಾಲಕ್ರಮೇಣ ಅವು ನೆನಪಿನ ಪುಟಗಳಿಗೆ ಜಾರುತ್ತಿವೆ. ಆ ಪಟ್ಟಿಗೆ ಈಗ ಹಳೆಯ ಎಸ್‌ಪಿ ಕಚೇರಿ ಈಗ ಸೇರುತ್ತಿದೆ.

ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ನಗರಸಭೆ ಈಜುಕೊಳದ ಎದುರು ಭಾಗದಲ್ಲಿರುವ ಈ ಕಟ್ಟಡವನ್ನು ತೆರವು ಮಾಡುವ ಕಾರ್ಯ ಆರಂಭವಾಗಿದೆ. ಅದರ ಜಾಗದಲ್ಲಿ ಇನ್ನೊಂದೆರಡು ವರ್ಷಗಳಲ್ಲಿ ಭವ್ಯವಾದ ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣವಾಗಲಿದೆ. ಮಿನಿ ವಿಧಾನಸೌಧ ಮಾದರಿಯಲ್ಲಿ ಸರ್ಕಾರದ ಎಲ್ಲ ಕಚೇರಿಗಳೂ ಒಂದೇ ಸೂರಿನಡಿ ಬರುವ ರೀತಿಯಲ್ಲಿ ಕಟ್ಟಡದ ವಿನ್ಯಾಸವಿರಲಿದೆ.

ಬ್ರಿಟಿಷರ ಕಾಲದ ಕಟ್ಟಡ: ಈಗ ತೆರವು ಮಾಡಲಾಗುತ್ತಿರುವ ಕಟ್ಟಡವನ್ನು 1864ರ ಆಸುಪಾಸಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷರ ಆಡಳಿತದಲ್ಲಿ ಈ ಕಟ್ಟಡ ‘ಕಲೆಕ್ಟರ್ ಕಚೇರಿ’ಯಾಗಿತ್ತು. ಅಂದು ಸುಮಾರು ₹ 40 ಸಾವಿರ ವೆಚ್ಚದಲ್ಲಿ ಕಟ್ಟಲಾಗಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದು ಉತ್ತರ ಕನ್ನಡಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಾಗಿತ್ತು. ಎಸ್‌ಪಿ ಕಚೇರಿ ಹೊಸದಾಗಿ ನಿರ್ಮಾಣವಾದ ಬಳಿಕ ಇಲ್ಲಿ ರಾಜ್ಯ ಸರ್ಕಾರದ ವಿವಿಧ ಕಚೇರಿಗಳನ್ನು ತೆರೆಯಲಾಗಿತ್ತು.

ADVERTISEMENT

ಯಾವ್ಯಾವ ಕಚೇರಿಗಳಿದ್ದವು?:ಹಳೆಯ ಕಟ್ಟಡದಲ್ಲಿ ಜಿಲ್ಲಾ ಖಜಾನೆ ಇಲಾಖೆ, ನಗರ ಯೋಜನಾ ಇಲಾಖೆ, ಸಣ್ಣ ನೀರಾವರಿ ಇಲಾಖೆ ಉಪವಿಭಾಗ, ರಾಜ್ಯ ಗುಪ್ತ ವಾರ್ತೆ, ಹವಾಮಾನ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಆಹಾರ ನಿಗಮ, ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ, ನೆಹರೂಯುವ ಕೇಂದ್ರ, ಕಾರ್ಮಿಕ ಕಲ್ಯಾಣ ಇಲಾಖೆ, ಉದ್ಯೋಗ ವಿನಿಮಯ ಕಚೇರಿ, ನಗರ ಸರ್ವೇ ಇಲಾಖೆಯ ಕಚೇರಿಗಳಿದ್ದವು. ಅವುಗಳನ್ನು ಈ ಹಿಂದೆಯೇ ವಿವಿಧ ಸರ್ಕಾರಿ ಕಟ್ಟಡಗಳಿಗೆ ಹಾಗೂ ಖಾಸಗಿ ಕಟ್ಟಡಗಳಿಗೆ ಬಾಡಿಗೆ ಆಧಾರದಲ್ಲಿ ಸ್ಥಳಾಂತರ ಮಾಡಲಾಗಿದೆ.

ಕಚೇರಿಗಳಿಗೆ ಸ್ವಂತ ನೆಲೆ:ಹೊಸದಾಗಿ ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ₹ 25 ಕೋಟಿ ಮಂಜೂರಾಗಿದೆ. ಈಗಿನ ನಿರ್ಮಾಣ ವೆಚ್ಚವನ್ನು ಪರಿಶೀಲಿಸಿಕೊಂಡು ಹೆಚ್ಚಿನ ಅನುದಾನ ಬೇಕಾದರೆ ಜಿಲ್ಲಾಡಳಿತದಿಂದ ಪ್ರಸ್ತಾವ ಕಳುಹಿಸಬೇಕಾಗುತ್ತದೆ. ಈ ಕಟ್ಟಡ ನಿರ್ಮಾಣವಾದ ಬಳಿಕ ಹಲವು ಸರ್ಕಾರಿ ಕಚೇರಿಗಳಿಗೆ ಸ್ವಂತ ನೆಲೆ ಸಿಗಲಿದೆ. ಬಾಡಿಗೆ ಕಟ್ಟಡಗಳಲ್ಲಿರುವ ವಿವಿಧ ಕಚೇರಿಗಳನ್ನು ವರ್ಗಾಯಿಸಿ,ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಹೊರೆಯನ್ನು ತಪ್ಪಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.