ADVERTISEMENT

ಮಳೆ: ಆನ್‍ಲೈನ್ ತರಗತಿಗೆ ಅಡ್ಡಿ

ನೆಟ್‍ವರ್ಕ್‍ಗಾಗಿ ಗುಡ್ಡವೇರುವ ವಿದ್ಯಾರ್ಥಿಗಳಿಗೆ ಫಜೀತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 14:31 IST
Last Updated 13 ಜುಲೈ 2021, 14:31 IST
ಶಿರಸಿ ತಾಲ್ಲೂಕಿನ ಜಡ್ಡಿಗದ್ದೆಯಲ್ಲಿ ಆನ್‍ಲೈನ್ ತರಗತಿಗಾಗಿ ಬೆಟ್ಟದ ಮೇಲೆ ಗುಡಿಸಲೊಂದನ್ನು ನಿರ್ಮಿಸಿಕೊಂಡಿರುವುದು
ಶಿರಸಿ ತಾಲ್ಲೂಕಿನ ಜಡ್ಡಿಗದ್ದೆಯಲ್ಲಿ ಆನ್‍ಲೈನ್ ತರಗತಿಗಾಗಿ ಬೆಟ್ಟದ ಮೇಲೆ ಗುಡಿಸಲೊಂದನ್ನು ನಿರ್ಮಿಸಿಕೊಂಡಿರುವುದು   

ಶಿರಸಿ: ಅಪ್ಪಟ ಮಲೆನಾಡು ಭಾಗವಾಗಿರುವ ತಾಲ್ಲೂಕಿನಲ್ಲಿ ಮಂಗಳವಾರ ಮಳೆ ಅಬ್ಬರಿಸಿತು. ಪರಿಣಾಮ ಅಂತರ್ಜಾಲ ಸಂಪರ್ಕ ಕಳೆದುಕೊಂಡ ಹಳ್ಳಿಗಳಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗೆ ಅಡ್ಡಿಯಾಯಿತು.

ಕೋವಿಡ್ ಪರಿಸ್ಥಿತಿ ವೇಳೆ ದೂರವಾಣಿ ಸಂಪರ್ಕಕ್ಕೆ ಸಾಧ್ಯವಾಗದ ಹಳ್ಳಿಗಳ ಪಟ್ಟಿಯನ್ನು ತಾಲ್ಲೂಕು ಆಡಳಿತ ಸಿದ್ಧಪಡಿಸಿತ್ತು. ಈ ವೇಳೆ ಸುಮಾರು 84ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಿಗದ ಸ್ಥಿತಿ ಇರುವುದು ದೃಢಪಟ್ಟಿತ್ತು. ಇಂತಹ ಹಳ್ಳಿಗಳಲ್ಲಿ ನೂರಾರು ವಿದ್ಯಾರ್ಥಿಗಳಿದ್ದು ಅವರೆಲ್ಲ ಆನ್‍ಲೈನ್ ತರಗತಿಗೆ ಹಾಜರಾಗಲು ಊರಿನಲ್ಲಿರುವ ಎತ್ತರದ ಗುಡ್ಡ ಬೆಟ್ಟ ಏರುವ ಅನಿವಾರ್ಯತೆ ಇದೆ.

ಸದ್ಯ ಮಳೆ ವಿಪರೀತ ಸುರಿಯುತ್ತಿರುವ ಕಾರಣ ಗುಡ್ಡದ ಮೇಲೇರಿ ಪಾಠ ಕೇಳುವುದೂ ಕಷ್ಟವಾಗುತ್ತಿದೆ. ಅನೇಕ ಗ್ರಾಮಗಳಲ್ಲಿ ಮಳೆ–ಗಾಳಿಯ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಹೀಗಾಗಿ, ಟವರ್ ಕಾರ್ಯಾಚರಣೆಯೂ ನಿಂತಿದ್ದು ನೆಟ್‍ವರ್ಕ್ ಲಭಿಸುತ್ತಿಲ್ಲ.

ADVERTISEMENT

ವಿದ್ಯಾರ್ಥಿಗಳ ಸಮಸ್ಯೆ ಅರಿತ ಹಲವು ಶಾಲೆಗಳು ಮಂಗಳವಾರದಿಂದ ಅನಿರ್ದಿಷ್ಟ ಅವಧಿಗೆ ಆನ್‍ಲೈನ್ ತರಗತಿ ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ನೀಡಿವೆ. ವಾಟ್ಸ್‌ ಆ್ಯಪ್ ಗುಂಪುಗಳ ಮೂಲಕ ಪಾಠದ ಆನ್‍ಲೈನ್ ಲಿಂಕ್ ಕಳಿಸಿಕೊಡಲಾಗುತ್ತದೆ ಎಂದು ಕೆಲ ಶಿಕ್ಷಕರು ತಿಳಿಸಿದರೆ, ಮತ್ತೆ ಕೆಲ ಶಿಕ್ಷಕರು ನೋಟ್ಸ್‌ಗಳನ್ನು ಕಳುಹಿಸಿ, ಮನೆಯಲ್ಲಿ ವ್ಯಾಸಂಗ ಮಾಡಲು ಸೂಚಿಸಿದ್ದಾರೆ.

‘ಮಳೆ ವಿಪರೀತ ಸುರಿದರೆ ಗುಡ್ಡ–ಬೆಟ್ಟ ಏರುವುದು ಕಷ್ಟ. ಜಿಗಣೆ ಕಾಟವೂ ಹೆಚ್ಚು. ಅಲ್ಲದೆ ಗಾಳಿ ಹೆಚ್ಚಿದ್ದರೆ ಮರಗಳು ಬೀಳುವ ಅಪಾಯದಿಂದ ಮಕ್ಕಳನ್ನು ಹೊರಗೆ ಕಳುಹಿಸುವುದು ಕಷ್ಟ’ ಎಂದು ಪಾಲಕ ಮಂಜುನಾಥ ಹೆಗಡೆ ಸಮಸ್ಯೆ ಹೇಳಿಕೊಂಡರು.

ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಸಮಸ್ಯೆ ಆದರೆ ವಾರಕ್ಕೆ ಒಮ್ಮೆ ಪಾಲಕರು ಶಾಲೆಗೆ ಭೇಟಿ ನೀಡಿ ನೋಟ್ಸ್, ಪಠ್ಯದ ಮಾಹಿತಿ ಪಟ್ಟಿ ಪಡೆದು ಮಕ್ಕಳಿಗೆ ಓದಿಸಲು ಅವಕಾಶವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.