ADVERTISEMENT

ಶಿರಸಿ | ‘ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ’: ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ

ಬಕ್ರೀದ್ ಶಾಂತಿಪಾಲನಾ ಸಭೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 11:53 IST
Last Updated 29 ಜುಲೈ 2020, 11:53 IST
ಶಿರಸಿಯಲ್ಲಿ ನಡೆದ ಬಕ್ರೀದ್ ಶಾಂತಿಪಾಲನಾ ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿದರು. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದಾರೆ
ಶಿರಸಿಯಲ್ಲಿ ನಡೆದ ಬಕ್ರೀದ್ ಶಾಂತಿಪಾಲನಾ ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿದರು. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದಾರೆ   

ಶಿರಸಿ: ಕೋವಿಡ್ 19 ಕಾರಣಕ್ಕೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮಸೀದಿಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ. ಒಂದೊಮ್ಮೆ ಸೂಚನೆ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಹೇಳಿದರು.

ಬಕ್ರೀಗ್ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿ ಕರೆದಿದ್ದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಬಕ್ರೀದ್ ಹಬ್ಬವನ್ನು ಮನೆಗೆ ಸೀಮಿತವಾಗಿ ಮಾಡಬೇಕು. ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಕುರಬಾನಿ ಹೆಸರಿನಲ್ಲಿ ಬಡವರಿಗೆ ಆಹಾರ ಹಂಚಲು ಈ ಬಾರಿ ಅವಕಾಶವಿಲ್ಲ. ಅದಕ್ಕೆ ಮೀಸಲಿಟ್ಟ ಮೊತ್ತವನ್ನು ಬೇರೆ ಸಂದರ್ಭದಲ್ಲಿ ನೀಡಬಹುದು. ಸಂಪ್ರದಾಯವನ್ನು ಅನುಸರಿಸಲು ಹೋಗಿ ಕೊರೊನಾ ಸೋಂಕು ಹೆಚ್ಚಲು ಯಾರೂ ಕಾರಣರಾಗಬಾರದು’ ಎಂದರು.

ಮಸೀದಿಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಮತ್ತು ಮುಖಗವಸು ಬಳಸಬೇಕು. 60 ವರ್ಷ ಮೇಲ್ಪಟ್ಟವರು, 10 ವರ್ಷಕ್ಕಿಂತ ಕೆಳಗಿನವರು ಹೋಂ ಕ್ವಾರಂಟೈನ್ ಇರುವವರು, ಜ್ವರದ ಲಕ್ಷಣ ಇರುವವರು ಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬಾರದು ಎಂದು ತಿಳಿಸಿದರು.

ADVERTISEMENT

ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿ, ‘ಆಡಳಿತ ನೀಡಿರುವ ಸೂಚನೆ ಪಾಲಿಸುವಂತೆ ಮಸೀದಿಗಳಲ್ಲಿ ಆದೇಶ ಹೊರಡಿಸಬೇಕು. ಮೂರು ದಿನಗಳ ಹಬ್ಬದ ಆಚರಣೆಯಲ್ಲಿ ಅನಗತ್ಯ ಓಡಾಟಕ್ಕೆ ಅವಕಾಶ ನೀಡಿದರೆ, ಕೊರೊನಾ ವೈರಸ್‌ ಹರಡಲು ಕಾರಣವಾಗಬಹುದು’ ಎಂದರು.

ರೇವಣಕಟ್ಟಾದ ಮಹಮ್ಮದ್ ರಿಯಾಜ್ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಶಿಸ್ತು ಪಾಲನೆ ಕಷ್ಟವಾಗುತ್ತದೆ. ಯುವಜನರಿಗೆ ಆಡಳಿತವೇ ತಿಳಿ ಹೇಳಬೇಕು’ ಎಂದರು. ತಹಶೀಲ್ದಾರ್ ಎಂ.ಆರ್‌.ಕುಲಕರ್ಣಿ, ಸಿಪಿಐ ಪ್ರದೀಪ ಬಿ.ಯು, ಪಿಎಸ್‌ಐಗಳಾದ ನಾಗಪ್ಪ ಬಿ, ಶಿವಾನಂಗ ನಾವಲಗಿ, ಅಬೂಜರ್ ಹೆಗಡೆಕಟ್ಟಾ, ಎ. ರೆಹಮಾನ್, ತಾಲ್ಲೂಕಿನ ಎಲ್ಲ ಮಸೀದಿ ಸಮಿತಿಗಳ ಮುಖ್ಯಸ್ಥರು, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.