ADVERTISEMENT

ಪ್ಯಾಕೇಜ್ ಘೋಷಣೆ ಬಿಜೆಪಿಯ ಫ್ಯಾಶನ್

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 11:01 IST
Last Updated 6 ಡಿಸೆಂಬರ್ 2021, 11:01 IST
ಬನವಾಸಿಯಲ್ಲಿ ನಡೆದ  ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತ ಯಾಚಿಸಿ ಮಾತನಾಡಿದರು.
ಬನವಾಸಿಯಲ್ಲಿ ನಡೆದ  ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತ ಯಾಚಿಸಿ ಮಾತನಾಡಿದರು.   

ಶಿರಸಿ: ಅಭಿವೃದ್ಧಿ, ಪರಿಹಾರದ ನೆಪ ಹೇಳಿ ಪ್ಯಾಕೇಜ್ ಘೋಷಿಸುವದು ಬಿಜೆಪಿಗೆ ಫ್ಯಾಶನ್ ಆಗಿದೆ. ಈ ಘೋಷಣೆ ಕೇವಲ ಪ್ರಚಾರ ಪಡೆಯುವ ತಂತ್ರವೇ ಹೊರತು ಕಾರ್ಯರೂಪಕ್ಕೆ ತರುವುದಕ್ಕಲ್ಲ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಕಳೆದ ಮಳೆಗಾಲದಲ್ಲಿ ಉಂಟಾಗಿದ್ದ ನೆರೆ ಹಾವಳಿಯಿಂದ ಉತ್ತರ ಕನ್ನಡದಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಮುಖ್ಯಮಂತ್ರಿ ಅಧಿಕಾರ ವಹಿಸಿದ್ದ ಮಾರನೇ ದಿನವೇ ಜಿಲ್ಲೆಗೆ ಬಂದು ಪರಿಹಾರದ ಪ್ಯಾಕೇಜ್ ಘೊಷಿಸಿ ಹೋದರು. ಈವರೆಗೆ ಯಾವುದೇ ಕೆಲಸವಾಗಿಲ್ಲ’ ಎಂದರು.

‘ಬಿಜೆಪಿ ಪಂಚಾಯತರಾಜ್ ವ್ಯವಸ್ಥೆಯ ಕಡು ವಿರೋಧಿ. ಬಡವರಿಗೆ ಉದ್ಯೋಗ ನೀಡುವ ಕಾಂಗ್ರೆಸ್ ಸರ್ಕಾರದ ನರೇಗಾ ಯೋಜನೆಯನ್ನು ಪ್ರಧಾನಿ ಮೋದಿ ಲೇವಡಿ ಮಾಡಿದ್ದರು. ಅವರು ಅಧಿಕಾರಕ್ಕೆ ಬಂದ ಮೇಲೆ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಹೊಸ ಯೋಜನೆಗಳು ಜಾರಿಗೆ ಬಂದಿಲ್ಲ’ ಎಂದರು.

ADVERTISEMENT

‘ಅಧಿಕಾರದಲ್ಲಿದ್ದ ಪಕ್ಷ ಚುನಾವಣೆ ಗೆಲ್ಲುತ್ತದೆ ಎಂಬ ಭ್ರಮೆಯಲ್ಲಿ ಬಿಜೆಪಿ ಸಚಿವರಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ವಿಚಾರವಂತರು ಮತದಾರರು ಎಂಬುದನ್ನು ಮರೆತು ಇಲ್ಲಸಲ್ಲದ ಹೇಳಿಕೆಯನ್ನು ಸಚಿವರು ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

ಬಳಿಕ ಅವರು ಬನವಾಸಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿಯೂ ಪಾಲ್ಗೊಂಡರು.

ಎಸ್.ಕೆ.ಭಾಗವತ, ರವೀಂದ್ರ ನಾಯ್ಕ, ದೀಪಕ ದೊಡ್ಡೂರು, ಜಗದೀಶ ಗೌಡ, ಸಿ.ಎಫ್.ನಾಯ್ಕ, ಜ್ಯೋತಿ ಪಾಟೀಲ್, ಬಸವರಾಜ ದೊಡ್ಮನಿ, ಸತೀಶ ನಾಯ್ಕ, ಅಬ್ಬಾಸ್ ತೊನ್ಸೆ, ಶ್ರೀಲತಾ ಕಾಳೇರಮನೆ, ಸುಧಾಕರ ನಾಯ್ಕ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.