ADVERTISEMENT

ಕುಳವೆ: ಕಾಡುಕೋಣ ದಾಳಿಗೆ ನಾಶವಾದ ಭತ್ತದ ಸಸಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 14:56 IST
Last Updated 22 ಆಗಸ್ಟ್ 2021, 14:56 IST
ಶಿರಸಿ ತಾಲ್ಲೂಕಿನ ಕುಳವೆ ಗ್ರಾಮದಲ್ಲಿ ಕಾಡುಕೋಣಗಳ ದಾಳಿಗೆ ಹಾಳಾಗಿರುವ ಭತ್ತದ ಗದ್ದೆ
ಶಿರಸಿ ತಾಲ್ಲೂಕಿನ ಕುಳವೆ ಗ್ರಾಮದಲ್ಲಿ ಕಾಡುಕೋಣಗಳ ದಾಳಿಗೆ ಹಾಳಾಗಿರುವ ಭತ್ತದ ಗದ್ದೆ   

ಶಿರಸಿ: ತಾಲ್ಲೂಕಿನ ಕುಳವೆ ಗ್ರಾಮದ ಹತ್ತಾರು ಎಕರೆ ಭತ್ತದ ಗದ್ದೆ ಕಾಡುಕೋಣದ ದಾಳಿಗೆ ನಾಶವಾಗಿದೆ. ಕಾಡುಪ್ರಾಣಿ ಭತ್ತದ ಸಸಿಗಳನ್ನು ತುಳಿದ ಪರಿಣಾಮ ಬೆಳೆ ನಷ್ಟದ ಭೀತಿಯಲ್ಲಿ ರೈತರಿದ್ದಾರೆ.

ಇತ್ತೀಚೆಗಷ್ಟೆ ನಾಟಿ ಮಾಡಲಾದ ಎಕರೆಗಟ್ಟಲೆ ಸಸಿಗಳು ಹಾಳಾಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಕಾಡುಕೋಣಗಳ ಹಿಂಡು ನಿತ್ಯ ಗದ್ದೆಗೆ ಬರುತ್ತಿವೆ. ಅವು ಓಡಾಟ ನಡೆಸಿದ ಪರಿಣಾಮ ಹೊಂಡಗಳು ಬಿದ್ದಿವೆ. ಬಹುತೇಕ ಸಸಿಗಳನ್ನು ಅವು ತಿಂದಿವೆ.

ಗ್ರಾಮದ ಮೇಧಾತಿತಿ ಶಾಸ್ತ್ರೀ, ದೇವರು ನಾರಾಯಣ ಗೌಡ, ಸೀತಾರಾಮ ಗಣಪತಿ ಹೆಗಡೆ ಸೇರಿದಂತೆ ಹಲವು ರೈತರಿಗೆ ಸೇರಿರುವ ಹತ್ತಾರು ಎಕರೆ ಭತ್ತದ ಗದ್ದೆ ನಾಶವಾಗಿದೆ.

ADVERTISEMENT

‘ಗುಂಪಿನಲ್ಲಿ ಮೂರು ಕಾಡುಕೋಣ ಹಾಗೂ ಒಂದು ಕರು ಇದೆ. ನಸುಕಿನ ಜಾವ ಅವು ಗದ್ದೆಗೆ ಬಂದು ಎಳೆಯ ಸಸಿಗಳನ್ನು ತಿನ್ನುತ್ತಿವೆ. ಸಾವಿರಾರು ಖರ್ಚು ಮಾಡಿ ನಾಟಿ ಮಾಡಿಸಿದ್ದ ಸಸಿಗಳನ್ನು ಕಳೆದುಕೊಂಡಿದ್ದೇವೆ. ಈ ವರ್ಷ ಭತ್ತದ ಬೆಳೆ ಸಿಗುವುದು ಕಷ್ಟ’ ಎಂದು ರೈತ ಮೇಧಾತಿತಿ ಶಾಸ್ತ್ರೀ ಹೇಳಿದರು.‌

‘ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯಲು ಕಷ್ಟವಾಗುತ್ತಿದೆ. ಲಕ್ಷಾಂತರ ಮೌಲ್ಯದ ಬೆಳೆಯನ್ನು ಕಳೆದುಕೊಳ್ಳುವ ಹಾಗಾಗಿದೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ಕೊಡಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.

‘ಕುಳವೆ ಗ್ರಾಮದಲ್ಲಿ ಉಂಟಾದ ಹಾನಿಯ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.