ADVERTISEMENT

ಉತ್ತರಕನ್ನಡ: ಕೃಷಿಗೆ ‘ತಣ್ಣೀರು’ ಎರಚಿದ ಹಳ್ಳ

ಭಾರಿ ಮಳೆಯಿಂದ ಕಾರವಾರದ ನಗೆ ಗ್ರಾಮದಲ್ಲಿ ಭತ್ತದ ಬೇಸಾಯಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 11:28 IST
Last Updated 12 ಜುಲೈ 2020, 11:28 IST
ಕಾರವಾರ ತಾಲ್ಲೂಕಿನ ನಗೆ ಗ್ರಾಮದಲ್ಲಿ ಗದ್ದೆಯ ಮೇಲೆ ಹಳ್ಳದ ನೀರು ಹರಿಯುವುದನ್ನು ಕೃಷಿಕರು ಅಸಹಾಯಕರಾಗಿ ನೋಡುತ್ತಿರುವುದು
ಕಾರವಾರ ತಾಲ್ಲೂಕಿನ ನಗೆ ಗ್ರಾಮದಲ್ಲಿ ಗದ್ದೆಯ ಮೇಲೆ ಹಳ್ಳದ ನೀರು ಹರಿಯುವುದನ್ನು ಕೃಷಿಕರು ಅಸಹಾಯಕರಾಗಿ ನೋಡುತ್ತಿರುವುದು   

ಕಾರವಾರ: ಕೊರೊನಾ ವೈರಸ್‌ ಹರಡುತ್ತಿರುವ ಸಂಕಷ್ಟದ ದಿನದಲ್ಲೂ ಕಷ್ಟಪಟ್ಟು ಬೇಸಾಯ ಮಾಡಿದ್ದ ರೈತರಿಗೆ ಜುಲೈ 9ರಂದು ಸುರಿದ ಭಾರಿ ಮಳೆಯು ಅಪಾರ ನಷ್ಟವುಂಟು ಮಾಡಿದೆ. ನಾಟಿ ಮಾಡಲಾಗಿದ್ದ ಭತ್ತದ ಸಸಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ರೈತರು ಕಂಗೆಡುವಂತಾಗಿದೆ.

ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಗೆ ಗ್ರಾಮದಲ್ಲಿ ಹರಿಯುವ ಹಳ್ಳವು ಭಾರಿ ಮಳೆಯಿಂದ ಉಕ್ಕಿ ಹರಿಯಿತು. ಇದರ ಪರಿಣಾಮ ಸಮೀಪದಲ್ಲಿರುವ ಭತ್ತದ ಗದ್ದೆಗಳು ಜಲಾವೃತವಾದವು. ನಾಟಿ ಮಾಡಿದ್ದ ಭತ್ತದ ಸಸಿಗಳು ನೀರಿನ ರಭಸಕ್ಕೆ ಸಿಲುಕು ಕೊಚ್ಚಿಕೊಂಡು ಹೋದವು. ಸುಮಾರು ಎಂಟು ಎಕರೆಗಳಷ್ಟು ಹೊಲಕ್ಕೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ, ಅತ್ಯಂತ ಗ್ರಾಮೀಣ ಸೊಗಡಿನ ಊರು ನಗೆ. ಇಲ್ಲಿನ ಬಹುಪಾಲು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ.ಕೋವಿರ್ 19, ಲಾಕ್‌ಡೌನ್‌ನಂತಹ ಸಮಸ್ಯೆಗಳಿಂದಾಗಿ ಈ ವರ್ಷ ಉಳುಮೆ, ಬಿತ್ತನೆಯ ಸಂದರ್ಭದಲ್ಲಿ ಕೂಲಿಯಾಳುಗಳು ಸಿಕ್ಕಿರಲಿಲ್ಲ. ಕುಟುಂಬದ ಸದಸ್ಯರೇ ಒಟ್ಟಾಗಿ ಕಷ್ಟಪಟ್ಟು ಬೇಸಾಯದಲ್ಲಿ ತೊಡಗಿದ್ದರು. ಬಿತ್ತನೆ ಬೀಜ ಖರೀದಿಗೂ ಹಣಕಾಸು ಸಮಸ್ಯೆ ತಲೆದೋರಿ, ಪರಿಚಯಸ್ಥರಿಂದ ಸಾಲ ಪಡೆದು ಕೃಷಿ ಮಾಡಿದವರೂ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಬ್ಬರಿಸಿದ ಹಳ್ಳದ ನೀರು, ಗದ್ದೆಯಲ್ಲಿದ್ದ ಕೃಷಿಯನ್ನು ಕೊಚ್ಚಿಕೊಂಡು ಹೋಗಿದೆ.

ADVERTISEMENT

ಇಲ್ಲಿನ ಹಳ್ಳದಲ್ಲಿ ಬೆಟ್ಟದ ಮೇಲಿನ ನೀರು ಭರ್ತಿಯಾಗಿ ಹರಿಯುತ್ತದೆ. ಕೆಲವು ತಿಂಗಳ ಹಿಂದೆ ಇಲ್ಲಿಗೆ ಸಿಮೆಂಟ್‌ನ ಕಾಲುಸಂಕ ನಿರ್ಮಿಸಲಾಗಿದೆ. ಆದರೆ, ತಡೆಗೋಡೆ ನಿರ್ಮಿಸಿಲ್ಲ. ಹಾಗಾಗಿ ನೀರು ಉಕ್ಕಿಹರಿದು ಕೃಷಿಭೂಮಿಯನ್ನು ಆವರಿಸಿಕೊಳ್ಳುತ್ತದೆ. ಇದರಿಂದ ಕೃಷಿಕರ ಶ್ರಮ ಫಲ ನೀಡುವ ಮೊದಲೇ ನೀರುಪಾಲಾಗುತ್ತಿದೆ. ಸಾಲ ಮಾಡಿ ಹೂಡಿದ್ದ ಬಂಡವಾಳ ನಷ್ಟವಾಗುತ್ತಿದೆ ಎಂದು ಸ್ಥಳೀಯ ರೈತರ ರಮೇಶ ಗೌಡ ಬೇಸರಿಸಿದ್ದಾರೆ.

ಈ ವರ್ಷದ ಮಳೆಗಾಲದಲ್ಲಿ ಇದೇ ರೀತಿ ಮತ್ತಷ್ಟು ಜೋರಾಗಿ ಮಳೆಯಾದರೆ ಗದ್ದೆಯಲ್ಲಿಮತ್ತೆ ನೀರು ತುಂಬಿಕೊಳ್ಳಬಹುದು. ಆಗ ಮತ್ತೊಮ್ಮೆ ನಷ್ಟವಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ತಡೆಗೋಡೆ ನಿರ್ಮಿಸಿ’: ನಗೆ ಗ್ರಾಮವು ಹಳ್ಳಗಳಿಂದ ಕೂಡಿದ ಪ್ರದೇಶವಾಗಿದೆ.ಮುಂದೆ ಭಾರಿ ಮಳೆಯಾದರೆ ಸ್ಥಳೀಯ ರೈತರಿಗೆತೊಂದರೆಯಾಗದಂತೆ ಹಳ್ಳಗಳಿಗೆ ತಡೆಗೋಡೆ ನಿರ್ಮಿಸಬೇಕು. ನೀರು ಸರಾಗವಾಗಿ ಹರಿದು ಹೋಗಲು ಕ್ರಮ ವಹಿಸಬೇಕು ಎಂದು ಸ್ಥಳೀಯ ಯುವಕಪ್ರಜ್ವಲ್ ಬಾಬುರಾಯ ಶೇಟ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.