ADVERTISEMENT

ಪವನ್‌ಗೆ ಒಲಿದ ಕಬಡ್ಡಿ

ಅಂತರರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ಉತ್ತಮ ಆಟಗಾರ ಬಹುಮಾನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 15:18 IST
Last Updated 12 ನವೆಂಬರ್ 2019, 15:18 IST
ಪವನಕುಮಾರ್ ನಂದಿಕೇಶ್ವರಮಠ
ಪವನಕುಮಾರ್ ನಂದಿಕೇಶ್ವರಮಠ   

ಶಿರಸಿ: ಚಿಕ್ಕಂದಿನಿಂದಲೇ ಕಬಡ್ಡಿಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಈ ಬಾಲಕ ಪ್ರೌಢ ಶಿಕ್ಷಣ ಕಲಿಯುವ ಹೊತ್ತಿಗೆ ಇದೇ ಕ್ಷೇತ್ರದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಲು ನಿರ್ಧರಿಸಿದ. ಛಲ ಬಿಡದ ತ್ರಿವಿಕ್ರಮನಂತೆ ಸತತ ತಾಲೀಮು ನಡೆಸಿ, ಸ್ಥಳೀಯ ಪಂದ್ಯಗಳಲ್ಲೆಲ್ಲ ಭಾಗವಹಿಸಿದ. ಆ ಪ್ರಯತ್ನವೇ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆಯುವ ಮಟ್ಟಕ್ಕೆ ತಂದು ನಿಲ್ಲಿಸಿದೆ.

ತಾಲ್ಲೂಕಿನ ದಾಸನಕೊಪ್ಪದ ಪವನಕುಮಾರ್ ನಂದಿಕೇಶ್ವರಮಠ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿ. ಎರಡು ದಿನಗಳ ಹಿಂದೆ ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯದಲ್ಲಿ, ಭಾರತ ತಂಡದ ಆಟಗಾರನಾಗಿ ಭಾಗವಹಿಸಿ, ತಂಡ ಪ್ರಥಮ ಬಹುಮಾನ ಪಡೆಯುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಅಲ್ಲದೇ, ಉತ್ತಮ ಆಟಗಾರ ಬಹುಮಾನ ಪಡೆದಿದ್ದಾರೆ. ಅವರು ಶಿವಲೀಲಾ ಮತ್ತು ಬದನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಪುತ್ರ.

‘ಪ್ರಾಥಮಿಕ ಶಿಕ್ಷಣವನ್ನು ದಾಸನಕೊಪ್ಪದಲ್ಲಿ ಪಡೆದ ಪವನ್‌ನನ್ನು ಪ್ರೌಢ ಶಿಕ್ಷಣಕ್ಕಾಗಿ ಹೊಸನಗರದ ರಾಮಕೃಷ್ಣ ವಿದ್ಯಾಲಯಕ್ಕೆ ಸೇರಿಸಿದ್ದೆವು. ಅಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ್ ಅವರು ಪವನ್‌ನ ಪ್ರತಿಭೆಗೆ ನೀರೆರೆದರು. ಅವನಲ್ಲಿರುವ ಆಸಕ್ತಿ ಕಂಡು ಪ್ರೋತ್ಸಾಹಿಸಿದರು. 2018ರಲ್ಲಿ ಹಾವೇರಿಯಲ್ಲಿ ನಡೆದ ಕಬಡ್ಡಿ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಅದೇ ಶಿಕ್ಷಕರು ಪವನ್‌ಗೆ ಕರೆ ಮಾಡಿ ತಿಳಿಸಿದರು. 21 ವರ್ಷದೊಳಗಿನ ಆಟಗಾರರ ವಿಭಾಗದಿಂದ ಆಯ್ಕೆಯಾದ ಆತ, ಗೋವಾದಲ್ಲಿ ಹಾಗೂ ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಭಾಗವಹಿಸಿದ. ಎರಡೂ ಕಡೆಗಳಲ್ಲೂ ಅವನಿದ್ದ ತಂಡಕ್ಕೆ ಬಹುಮಾನ ಬಂತು’ ಎನ್ನುತ್ತಾರೆ ಬಸವರಾಜ ನಂದಿಕೇಶ್ವರಮಠ.

ADVERTISEMENT

‘ಅವನಿಗೆ ಚಿಕ್ಕಂದಿನಿಂದಲೂ ಕಬಡ್ಡಿಯಲ್ಲಿ ಆಸಕ್ತಿ. ಊರಿನ ಸುತ್ತಮುತ್ತ ಎಲ್ಲೇ ಕಬಡ್ಡಿ ಪಂದ್ಯವಿದ್ದರೂ, ಕೆಲವೊಮ್ಮೆ ಆಟಗಾರನಾಗಿ, ಇನ್ನು ಕೆಲವೊಮ್ಮೆ ಪ್ರೇಕ್ಷಕನಾಗಿ ಪವನ್ ಅಲ್ಲಿರುತ್ತಿದ್ದ. ಅವನ ಆಸಕ್ತಿಯನ್ನು ನಾವು ಪ್ರೋತ್ಸಾಹಿಸಿದ್ದು ಬಿಟ್ಟರೆ ಉಳಿದೆಲ್ಲ ಸಾಧನೆಗೆ ಅವನ ಶ್ರಮವೇ ಕಾರಣ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.