ADVERTISEMENT

ಅಗತ್ಯ ಕಾಮಗಾರಿಗೆ ಅವಕಾಶ: ಸಚಿವ ಶಿವರಾಮ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 14:14 IST
Last Updated 24 ಏಪ್ರಿಲ್ 2020, 14:14 IST
ಶಿರಸಿ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು
ಶಿರಸಿ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು   

ಶಿರಸಿ: ರಸ್ತೆ, ನೀರಾವರಿ, ಬಾವಿ, ಬಾಂದಾರ, ಸೇತುವೆ ಸೇರಿದಂತೆ ಅಗತ್ಯ ಕಾಮಗಾರಿಗೆ ಅವಕಾಶ ನೀಡಲಾಗಿದ್ದು, ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಸ್ಥಳಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಅವರು, ನಂತರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೃಷಿ ಕಾರ್ಯಕ್ಕೆ ಸಂಬಂಧಿಸಿ ರೈತರಿಗೆ ಯಾವುದೇ ನಿರ್ಬಂಧವಿಲ್ಲ. ಪೊಲೀಸರು ಕೂಡ ಅನಗತ್ಯ ಕಿರುಕುಳ ನೀಡಬಾರದು ಎಂದರು.

ಲಾಕ್‌ಡೌನ್ ವೇಳೆ ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ, ಪೊಲೀಸರು ಮಾನವೀಯ ನೆಲೆಯಲ್ಲಿ ಕಾರ್ಯ ನಿರ್ವಹಿಸಬೇಕು. ಪೊಲೀಸರು ಉತ್ತಮ ಕಾರ್ಯ ಮಾಡಿದ್ದು, ಇನ್ನು ಮುಂದೆ ಕೂಡ ಅದೇ ರೀತಿ ನಡೆಯಬೇಕು ಎಂದರು. ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಪ್ರಮಾಣ ಹೆಚ್ಚಾಗಿದೆ. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜನ–ಜಾನುವಾರುಗಳಿಗೆ ಲಸಿಕೆ, ತೈಲ ವಿತರಿಸಲಾಗಿದೆ. ಜನರು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ವಿನಂತಿಸಿದರು.

ADVERTISEMENT

ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿ, ‘ಸಿದ್ದಾಪುರ ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸುವ ಜತೆಗೆ ಜನರಿಗೆ ಲಸಿಕೆ ನೀಡಲಾಗುತ್ತಿದೆ’ ಎಂದರು. ಡಿವೈಎಸ್ಪಿ ಜಿ‌.ಟಿ.ನಾಯಕ ಮಾತನಾಡಿ, ’ಲಾಕ್ ಡೌನ್ ಆದೇಶ ಉಲ್ಲಂಘಿಸಿದ 32ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿವಿಧ ಪ್ರಕರಣಕ್ಕೆ ಸಂಬಂಧಿಸಿ ₹ 10 ಲಕ್ಷಕ್ಕೂ ಹೆಚ್ಚಿನ ದಂಡ ಹಾಕಲಾಗಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಮಾತನಾಡಿ, ‘ಬನವಾಸಿ ಹಾಗೂ ಭಾಶಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ’ ಎಂದರು. ಉಂಚಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿ ಎರಡು ಕಾಮಗಾರಿಗಳು ಶೇ 75ರಷ್ಟು ಮುಗಿದಿವೆ. ಅದನ್ನು ಪೂರ್ಣಗೊಳಿಸಲು ಅನುಮತಿ ನೀಡಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಹೇಳಿದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಡಿಸಿಎಫ್ ಎಸ್.ಜಿ.ಹೆಗಡೆ ಇದ್ದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.