ADVERTISEMENT

ಪಾಕಿಸ್ತಾನಿ ಮಹಿಳೆಗೆ ಗುರುತಿನ ಚೀಟಿ ಸಿಕ್ಕಿದ್ದು ಹೇಗೆ?: ಪೊಲೀಸ್ ತನಿಖೆ

ಭಟ್ಕಳ: ಆರು ವರ್ಷಗಳಿಂದ ಅಕ್ರಮ ವಾಸವಿದ್ದ ಖತೀಜಾ ಮೆಹೆರಿನ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 13:24 IST
Last Updated 10 ಜೂನ್ 2021, 13:24 IST
ಭಟ್ಕಳದ ನವಾಯತ ಕಾಲೊನಿಯಲ್ಲಿ ಪಾಕಿಸ್ತಾನದ ಮಹಿಳೆ ಖತೀಜಾ ಮೆಹೆರಿನ್ ಅಕ್ರಮವಾಗಿ ವಾಸವಿದ್ದ ಮನೆ
ಭಟ್ಕಳದ ನವಾಯತ ಕಾಲೊನಿಯಲ್ಲಿ ಪಾಕಿಸ್ತಾನದ ಮಹಿಳೆ ಖತೀಜಾ ಮೆಹೆರಿನ್ ಅಕ್ರಮವಾಗಿ ವಾಸವಿದ್ದ ಮನೆ   

ಭಟ್ಕಳ: ಪಟ್ಟಣದಲ್ಲಿ ಆರು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಖತೀಜಾ ಮೆಹೆರಿನ್ ಬಂಧನದ ಬೆನ್ನಲ್ಲೇ ಪೊಲೀಸರು, ಸರ್ಕಾರದಿಂದ ನೀಡುವ ವಿವಿಧ ದಾಖಲೆಗಳನ್ನು ಪಡೆದುಕೊಂಡ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಅವರು ಪಟ್ಟಣದ ನವಾಯತ ಕಾಲೊನಿಯ ತಂಝೀಂ ರಸ್ತೆಯಲ್ಲಿರುವ ಪತಿ ಜಾವೀದ್‌ ಮೋಹಿದ್ದೀನ್ ರುಕ್ನುದ್ದೀನ್ ಮನೆಯಲ್ಲಿ ಅಕ್ರಮವಾಗಿ ವಾಸವಿದ್ದರು. ಆದರೆ, ತಾನು ಭಟ್ಕಳದಲ್ಲೇ ಜನಿಸಿದ್ದಾಗಿ ಪುರಸಭೆಯಿಂದ ಜನ್ಮದಾಖಲೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದರ ಆಧಾರದಲ್ಲಿ ಆಧಾರ್ ಕಾರ್ಡ್, ಪ್ಯಾನ್‌ಕಾರ್ಡ್, ಚುನಾವಣಾ ಗುರುತಿನ ಚೀಟಿ ಮಾಡಿಸಿಕೊಂಡಿದ್ದಾರೆ. ಹಾಗಾಗಿ, ಯಾವ ದಾಖಲೆಯ ಆಧಾರದಲ್ಲಿ ಪುರಸಭೆಯವರು ಜನ್ಮದಾಖಲೆ ನೀಡಿದ್ದಾರೆ ಎನ್ನುವುದು ತನಿಖೆಯಾಗುತ್ತಿದೆ.

ಪುರಸಭೆಯಿಂದ ಜನ್ಮದಾಖಲೆ ನೀಡಬೇಕಾದರೆ ಅದು, ಅವರು ಜನನವಾದ ಸಮಯದಲ್ಲಿ ನೊಂದಣಿಯಾಗಿರಬೇಕು. ಇಲ್ಲವಾದರೆ ವಿಳಂಬ ನೋಂದಣಿ ಮೂಲಕ ನ್ಯಾಯಾಲಯದಲ್ಲಿ ದಾವೆ ಹೂಡಿ ಜನ್ಮ ದಾಖಲೆ ಪಡೆಯಲು ಅವಕಾಶವಿದೆ. ಹೀಗೆ ದಾವೆ ಹೂಡುವ ಮೊದಲು ಪುರಸಭೆಯಿಂದ ನೋಂದಣಿ ಆಗದೇ ಇರುವ ಬಗ್ಗೆ ಪ್ರಮಾಣ ಪತ್ರ (ಅಲಭ್ಯ ಪ್ರಮಾಣಪತ್ರ) ಪಡೆದುಕೊಳ್ಳಬೇಕು.

ADVERTISEMENT

‌ಈ ಪ್ರಮಾಣ ಪತ್ರ ನೀಡುವಾಗ ಪುರಸಭೆಯು ಸ್ಥಳೀಯ ನಿವಾಸಿಯಾದ ಬಗ್ಗೆ ಫೋಟೊ ಇರುವ ಯಾವುದಾದರೊಂದು ಗುರುತಿನ ಚೀಟಿ ಪರಿಶೀಲಿಸಬೇಕಾಗುತ್ತದೆ. ಪಾಕಿಸ್ತಾನಿ ಮಹಿಳೆ ಹೀಗೆ ಪಡೆದುಕೊಳ್ಳುವಾಗ ನಕಲಿ ದಾಖಲೆ ಸೃಷ್ಟಿಸಿದ್ದರೇ ಅಥವಾ ಪುರಸಭೆಯ ಅಧಿಕಾರಿಗಳೇ ತಪ್ಪು ಎಸಗಿದ್ದಾರೆಯೇ ಎನ್ನುವುದು ತನಿಖೆಯಿಂದ ತಿಳಿದುಬರಲಿದೆ. ಒಂದೊಮ್ಮೆ ಪುರಸಭೆಯಿಂದ ತಪ್ಪಾಗಿದ್ದರೆ ಅಧಿಕಾರಿಗಳು ಕಾನೂನು ಕ್ರಮ ಎದುರಿಸುವ ಸಾಧ್ಯತೆಯಿದೆ.

‘ಮಾಹಿತಿ ಬಂದಿಲ್ಲ’:‘ಬಂಧಿತ ಪಾಕಿಸ್ತಾನಿ ಮಹಿಳೆ ಖತೀಜಾ ಮೆಹೆರೀನ್‌ಗೆ ಪುರಸಭೆಯಿಂದ ಜನ್ಮ ದಾಖಲೆ ನೀಡಿರುವ ಬಗ್ಗೆ ಮಾಹಿತಿ ಬಂದಿಲ್ಲ. ಒಂದು ವೇಳೆ ವಿಳಂಬ ನೋಂದಣಿ ಮೂಲಕ ಅವರು ಜನ್ಮದಾಖಲೆ ಪಡೆದುಕೊಂಡಿದ್ದರೆ, ಅವರಿಂದ ಸ್ಥಳೀಯ ನಿವಾಸಿ ಬಗ್ಗೆ ಗುರುತಿನ‌ ದಾಖಲೆ ಪರಿಶೀಲಿಸಿ ಅಲಭ್ಯ ಪತ್ರ ನೀಡಲಾಗಿರುತ್ತದೆ’ ಎಂದು ಭಟ್ಕಳ ಪುರಸಭೆ ಮುಖ್ಯಾಧಿಕಾರಿ ದೇವರಾಜು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.