ADVERTISEMENT

ಅಡಿಕೆ ಫಸಲು ಇಳಿಸುವ ಎಲೆಚುಕ್ಕಿ ರೋಗ: ರೈತ ವಲಯದಲ್ಲಿ ಆತಂಕ

ರೋಗ ನಿಯಂತ್ರಣಗೊಂಡ ಬಳಿಕವೂ ರೈತರಿಗೆ ಇಲ್ಲದ ನೆಮ್ಮದಿ

ಗಣಪತಿ ಹೆಗಡೆ
Published 5 ಡಿಸೆಂಬರ್ 2022, 19:30 IST
Last Updated 5 ಡಿಸೆಂಬರ್ 2022, 19:30 IST
ಎಲೆಚುಕ್ಕೆ ರೋಗಕ್ಕೆ ತುತ್ತಾಗಿ ಒಣಗುವ ಹಂತದಲ್ಲಿರುವ ಅಡಿಕೆ ಮರದ ಟೊಂಗೆಯನ್ನು ಪರಿಶೀಲಿಸುತ್ತಿರುವ ಶಿರಸಿ ತಾಲ್ಲೂಕಿನ ಹೊಸ್ಮನೆ ಗ್ರಾಮದ ರೈತ ರವಿ ಹೆಗಡೆ
ಎಲೆಚುಕ್ಕೆ ರೋಗಕ್ಕೆ ತುತ್ತಾಗಿ ಒಣಗುವ ಹಂತದಲ್ಲಿರುವ ಅಡಿಕೆ ಮರದ ಟೊಂಗೆಯನ್ನು ಪರಿಶೀಲಿಸುತ್ತಿರುವ ಶಿರಸಿ ತಾಲ್ಲೂಕಿನ ಹೊಸ್ಮನೆ ಗ್ರಾಮದ ರೈತ ರವಿ ಹೆಗಡೆ   

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಹೆಕ್ಟೇರ್‌ಗಿಂತಲೂ ಅಧಿಕ ಅಡಿಕೆ ಬೆಳೆ ಪ್ರದೇಶದಲ್ಲಿ ಈ ಬಾರಿ ವ್ಯಾಪಿಸಿಕೊಂಡ ಎಲೆಚುಕ್ಕೆ ರೋಗ ಇಳುವರಿ ಕುಸಿಯುವ ಆತಂಕವನ್ನು ರೈತ ವಲಯದಲ್ಲಿ ಹುಟ್ಟಿಹಾಕಿದೆ.

ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಸಿದ್ದಾಪುರ ತಾಲ್ಲೂಕಿನ ಹಲವು ಹಳ್ಳಿಗಳು, ಅರೆ ಬಯಲು ಸೀಮೆ ವಾತಾವರಣ ಹೊಂದಿರುವ ಶಿರಸಿ ತಾಲ್ಲೂಕಿನ ಬನವಾಸಿ, ಸಂತೊಳ್ಳಿ, ಅಂಡಗಿ, ಹೆಬ್ಬತ್ತಿ, ಯಲ್ಲಾಪುರ ತಾಲ್ಲೂಕಿನ ಮದನೂರು, ಕಿರವತ್ತಿ, ಮುಂಡಗೋಡ ತಾಲ್ಲೂಕುಗಳ ಹತ್ತಾರು ಹಳ್ಳಿಗಳಲ್ಲಿ ಎಲೆಚುಕ್ಕೆ ರೋಗ ವಿಪರೀತವಾಗಿ ಬಾಧಿಸಿದೆ.

ರೋಗ ನಿಯಂತ್ರಣಕ್ಕೆ ರೈತರು ತೋಟಗಾರಿಕಾ ಇಲಾಖೆಯ ಸೂಚನೆ ಆಧರಿಸಿ ರಾಸಾಯನಿಕ ಸಿಂಪಡಿಸಿದ್ದಾರೆ. ಇದರಿಂದ ರೋಗ ಬಹುಪಾಲು ಹತೊಟಿಗೆ ಬಂದಿದ್ದರೂ ಅಡಿಕೆ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕದಲ್ಲಿ ರೈತರಿದ್ದಾರೆ.

ADVERTISEMENT

‘ಅತಿವೃಷ್ಟಿಯಿಂದಾಗಿ ಕಳೆದ ಮೂರು ವರ್ಷಗಳಿಂದ ಅಡಿಕೆಗೆ ಕೊಳೆರೋಗ ಸಮಸ್ಯೆ ಹೆಚ್ಚಿದೆ. ಮಳೆಗಾಲ ಮುಗಿದ ಬಳಿಕ ವಾತಾವರಣ ಏರುಪೇರಿನಿಂದ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದೆ. ಇವೆರಡೂ ರೋಗ ನಿಯಂತ್ರಣಕ್ಕೂ ಔಷಧ ಸಿಂಪಡಣೆಗೆ ಹೆಚ್ಚು ವ್ಯಯವಾಗುತ್ತಿದೆ. ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆಗೆ ಪ್ರತಿ ಎಕರೆಗೆ ಸರಾಸರಿ ₹20 ರಿಂದ 22 ಸಾವಿರ ವ್ಯಯಿಸಿದ್ದೇವೆ’ ಎನ್ನುತ್ತಾರೆ ತಾಲ್ಲೂಕಿನ ಹೊಸ್ಮನೆ ಗ್ರಾಮದ ರೈತ ರವಿ ಹೆಗಡೆ.

‘ರಾಸಾಯನಿಕ ಸಿಂಪಡಣೆಯಿಂದ ರೋಗ ನಿಯಂತ್ರಣವಾಗಿದ್ದರೂ ಅಡಿಕೆ ಮರದ ಬೆಳವಣಿಗೆ ಕುಂಠಿತಗೊಂಡಿದೆ. ರೋಗಬಾಧಿತ ಮರಗಳಲ್ಲಿ ಸಿಂಗಾರ ಸರಿಯಾಗಿ ಬೆಳವಣಿಗೆ ಕಂಡಿಲ್ಲ. ಮುಂದಿನ ವರ್ಷದ ಫಸಲು ಅರ್ಧಕ್ಕಿಂತಲೂ ಇಳಿಮುಖಗೊಳ್ಳುವ ಚಿಂತೆ ಎದುರಾಗಿದೆ’ ಎಂದು ಸಮಸ್ಯೆ ವಿವರಿಸಿದರು.

‘ಎಲೆಚುಕ್ಕಿ ರೋಗಕ್ಕೆ ಕಾರಣವಾಗುವ ಕೊಲೆಟೊಟ್ರೈಕಮ್ ಗ್ಲೋಯೋಸ್ಪೊರಿಯೊಯಿಡ್ಸ್ ಎಂಬ ಶಿಲೀಂಧ್ರ ಸಕಾಲಕ್ಕೆ ಔಷಧ ಸಿಂಪಡಿಸಿದರೆ ಸಂಪೂರ್ಣ ನಾಶವಾಗುತ್ತದೆ. ತಡವಾಗಿ ಸಿಂಪಡಣೆ ಮಾಡಿದ್ದರೆ ಎಲೆಗಳನ್ನು ಸಂಪೂರ್ಣ ನಾಶಪಡಿಸಿ ಮರಗಳ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗುತ್ತದೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದರು.

‘ಎಲೆಚುಕ್ಕೆ ರೋಗ ಉಂಟುಮಾಡುವ ಹಾನಿ ಎರಡು ಅಥವಾ ಮೂರು ವರ್ಷದ ನಂತರ ಅರಿವಿಗೆ ಬರಲಾರಂಭಿಸುತ್ತದೆ. ರೋಗ ತಗುಲಿದ ಮರಗಳಿಂದ ಹೆಚ್ಚು ಇಳುವರಿ ಪಡೆಯುವುದು ಸಾಧ್ಯವಾಗದು. ಈಗಾಗಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರಿಗೆ ಇದರ ಕಹಿ ಅನುಭವ ಉಂಟಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್.

ಎಲೆಚುಕ್ಕೆ ರೋಗ ಹರಡಿದ ಆರಂಭದಲ್ಲೇ ಔಷಧ ಸಿಂಪಡಿಸಲು ಸಲಹೆ ನೀಡಲಾಗಿತ್ತು. ಸುಮಾರು ₹20 ಲಕ್ಷ ಮೊತ್ತದ ಔಷಧವನ್ನೂ ಹಂಚಿಕೆ ಮಾಡಿದ್ದೇವೆ .

–ಬಿ.ಪಿ.ಸತೀಶ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.