ಕಾರವಾರ: ‘ಯುವನಿಧಿ ಯೋಜನೆ ಫಲಾನುಭವಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವ ಮೂಲಕ ಅವರು ಸ್ವಾವಲಂಬಿ ಜೀವನ ನಡೆಸಲು ದಾರಿ ಮಾಡಿಕೊಡುವ ಕೆಲಸವಾಗಲಿ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ 2025ನೇ ಸಾಲಿನ ಯುವನಿಧಿ ನೋಂದಣಿ ಪ್ರಕ್ರಿಯೆ ಕುರಿತ ಪ್ರಚಾರದ ಭಿತ್ತಿಪತ್ರಗಳನ್ನು ಶನಿವಾರ ಬಿಡುಗಡೆಗೊಳಿಸಿ, ಬಳಿಕ ಅವರು ಮಾತನಾಡಿದರು.
‘ಫಲಾನುಭವಿಗಳಿಗೆ ಮಾಸಿಕ ಸಹಾಯಧನ ನೀಡಿದರೆ ಸಾಲದು. ಒಂದು ವರ್ಷದವರೆಗೆ ಮಾತ್ರ ಅವರಿಗೆ ಈ ಸೌಲಭ್ಯ ಸಿಗುತ್ತದೆ. ಅದರ ಬದಲಾಗಿ ಸಹಾಯಧನದೊಂದಿಗೆ ಅವರ ಆಸಕ್ತಿ ಗುರುತಿಸಿ, ಅಂತಹ ಕ್ಷೇತ್ರದಲ್ಲಿ ಸೂಕ್ತ ತರಬೇತಿ ನೀಡಿದರೆ ಉದ್ಯೋಗ ಅಥವಾ ಸ್ವಂತ ಉದ್ಯಮ ಸ್ಥಾಪನೆಗೆ ಯುವಕರು ಮನಸ್ಸು ಮಾಡುತ್ತಾರೆ’ ಎಂದರು.
‘ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಗೃಹ ಕೈಗಾರಿಕೆ, ಪರಿಸರ ಪೂರಕ ಉದ್ಯಮಗಳಿಗೆ ವಿಫುಲ ಅವಕಾಶವಿದೆ. ಇಂತಹ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಯುವಜನತೆ ಸಕ್ರೀಯವಾಗಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಆಡಳಿತ ವ್ಯವಸ್ಥೆ ಮೇಲಿದೆ. ಕೌಶಲಾಭಿವೃದ್ಧಿ ಕೇಂದ್ರವು ವಿಭಿನ್ನವಾದ, ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸುವ ಕ್ಷೇತ್ರಗಳಲ್ಲಿ ತರಬೇತಿ ಒದಗಿಸುವುದರತ್ತ ಗಮನ ಕೇಂದ್ರೀಕರಿಸಬೇಕು’ ಎಂದು ಸಲಹೆ ನೀಡಿದರು.
‘ಯುವನಿಧಿ ಫಲಾನುಭವಿಗಳು ತಮಗೆ ಅಗತ್ಯವಿರುವ ಕೌಶಲ ತರಬೇತಿಯನ್ನು, ಯುವನಿಧಿ ಪ್ಲಸ್ ಕೌಶಲ್ಯ ತರಬೇತಿ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವೆಬ್‍ಸೈಟ್ www.kaushalkar.com/app/registration_verify ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಉಚಿತ ತರಬೇತಿ ಪಡೆಯಲು ಅವಕಾಶವಿದೆ’ ಎಂದು ಜಿಲ್ಲಾ ಉದ್ಯೋಗಾಧಿಕಾರಿ ವಿನೋದ ನಾಯ್ಕ ವಿವರಿಸಿದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ನಾಗರಾಜ ಮುರುಡೇಶ್ವರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಕೆ.ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ರಜತ್ ಹಬ್ಬು, ಐಟಿಐ ಕಾಲೇಜಿನ ಪ್ರಾಚಾರ್ಯ ಪ್ರಕಾಶ್ ಕುಡಾಳಕರ್, ಸೀಡಾಕ್ ಸಿಬ್ಬಂದಿ ಶಿವರಾಜ್ ಕುಮಾರ್ ಹೆಳವಿ ಪಾಲ್ಗೊಂಡಿದ್ದರು.
ಸರ್ಕಾರ ಯುವಕರನ್ನು ಸ್ವಾವಲಂಬಿಯಾಗಿಸಲು ಯುವನಿಧಿ ಯೋಜನೆ ಜಾರಿಗೆ ತಂದಿದೆಯೇ ಹೊರತು ಸೋಮಾರಿಯಾಗಿಸಲು ಅಲ್ಲಡಾ.ದಿಲೀಷ್ ಶಶಿ ಜಿಲ್ಲಾ ಪಂಚಾಯಿತಿ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.