ADVERTISEMENT

ಸಾಬೀತು ಮಾಡದಿದ್ದರೆ ರಾಜೀನಾಮೆ ಕೊಡಿ: ಪ್ರದೀಪ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:07 IST
Last Updated 28 ಡಿಸೆಂಬರ್ 2025, 5:07 IST
<div class="paragraphs"><p>ಪ್ರದೀಪ ಶೆಟ್ಟಿ</p></div>

ಪ್ರದೀಪ ಶೆಟ್ಟಿ

   

ಶಿರಸಿ: ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರು ಮಾಡಿರುವ ಭೂಮಿಪೂಜೆ ಕಾಮಗಾರಿಗಳಲ್ಲಿ ಶೇಕಡಾ 90ರಷ್ಟು ಕಾಮಗಾರಿ ಆಗಿಲ್ಲ ಎನ್ನುವ ಬಿಜೆಪಿಯ ಅನಂತಮೂರ್ತಿ ಹೆಗಡೆ ಅನಗತ್ಯ ಪ್ರಚಾರದ ಹಿಂದೆ ಬಿದ್ದಿದ್ದಾರೆ. ಇದನ್ನು ಸಾಬೀತು ಮಾಡಿದರೆ ನಾವೆಲ್ಲರೂ ರಾಜೀನಾಮೆ ನೀಡುತ್ತೇವೆ. ಅಕಸ್ಮಾತ್ ಸಾಬೀತಾಗದಿದ್ದರೆ ಅವರು ರಾಜೀನಾಮೆ ನೀಡುತ್ತಾರಾ? ಎಂದು ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ಪ್ರಶ್ನಿಸಿದ್ದಾರೆ. 

ಶಾಸಕರು ಗುದ್ದಲಿ ಪೂಜೆ ಮಾಡಿಯೂ ತಾಂತ್ರಿಕ ಕಾರಣಗಳಿಗೆ ಆಗದೇ ಇರುವ ಕೆಲವು ಕಾಮಗಾರಿಗಳು ಇರಬಹುದು. ಆದರೆ ಶೇ.90ರಷ್ಟು ಕಾಮಗಾರಿ ಪ್ರಗತಿಯಲ್ಲಿದೆ. ಇದು ಅಲ್ಲ ಎಂಬುದನ್ನು ಅನಂತಮೂರ್ತಿ ಹೆಗಡೆ ಸಾಬೀತು ಮಾಡಬೇಕು’ ಎಂದರು. 

ADVERTISEMENT

‘2023–24ರ ಶಿರಸಿ ಮಾರಿಕಾಂಬಾ ಜಾತ್ರಾ ವಿಶೇಷ ಅನುದಾನ ₹5 ಕೋಟಿಯನ್ನು ಶಾಸಕರು ತರಲಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆಯಾಗಿ ಆರೇಳು ತಿಂಗಳಲ್ಲಿ ಜಾತ್ರೆ ಜರುಗಿದ್ದು,  ಎಸ್ಎಫ್ಸಿ ವಿಶೇಷ ಅನುದಾಮದಡಿ ಜಾತ್ರೆಗೆ ಅನುದಾನ ನೀಡಿದ್ದಾರೆ. ಜಾತ್ರೆಗಾಗಿ ವಿಶೇಷ ಅನುದಾನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ತಿಳಿವಳಿಕೆ ಇಲ್ಲದ ಅನಂತಮೂರ್ತಿ ಹೆಗಡೆ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದ ಅವರು, ಸಿಎಂ ಬಳಿ ₹5 ಕೋಟಿ ಅನುದಾನ ಕೇಳಿದ್ದು, ₹3.5 ಕೋಟಿ ಅನುದಾನ ಬಿಡುಗಡೆಯಾಗಿದೆ. ₹1.05 ಕೋಟಿ ರಸ್ತೆಗಳ ಮರು ಡಾಂಬರೀಕರಣ, ರಸ್ತೆ ಸುಧಾರಣೆ ಮತ್ತು ಅಭಿವೃದ್ಧಿಗೆ ₹1.50 ಕೋಟಿರಸ್ತೆ ಡಾಂಬರೀಕರಣ, ಅಭಿವೃದ್ಧಿ, ಚರಂಡಿ ನಿರ್ಮಾಣಕ್ಕೆ ₹1.65 ಕೋಟಿ ಸೇರಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಪ್ರಸ್ತುತ ಜಾತ್ರೆಗೆ ನಗರದ ಹಾಗೂ ಸುತ್ತಮುತ್ತಲ ಪ್ರದೇಶಗಳು ಅಭಿವೃದ್ಧಿ ಕಾಣುತ್ತವೆ’ ಎಂದು ಹೇಳಿದರು. 

‘ರಾಜ್ಯ ಸರ್ಕಾರದ ರಸ್ತೆಗಳ ಬಗ್ಗೆ ಮಾತನಾಡುವ ಅನಂತಮೂರ್ತಿ ಹೆಗಡೆ ಅವರು ಕೇಂದ್ರ ಸರ್ಕಾರದ ಹೆದ್ದಾರಿಗಳ ಕಾಮಗಾರಿ ಅಪೂರ್ಣತೆಯ ಬಗ್ಗೆ ಮಾತನಾಡುತ್ತಿಲ್ಲ. ಇದು ಅವರು ಶಾಸಕರನ್ನು ಗುರಿ ಮಾಡಿ ಹೇಳಿಕೆ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎಂದರು. 

ಕಾಂಗ್ರೆಸ್ ಪದಾಧಿಕಾರಿಗಳಾದ ದೀಪಕ ದೊಡ್ಡೂರು, ದಯಾ ನಾಯಕ, ಜ್ಯೋತಿ ‍ಪಾಟೀಲ, ಗೀತಾ ಶೆಟ್ಟಿ, ವನಿತಾ ಶೆಟ್ಟಿ, ಶೀಲು ಬ್ಲೆಜ್ ವಾಜ್, ಶಬೀನಾ ಇತರರು ಉಪಸ್ಥಿತರಿದ್ದರು.

ಇತ್ತೀಚೆಗೆ ಕಾಂಗ್ರೆಸ್‍ನಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ ನಡೆಸಲಾಗಿತ್ತು. ಆದರೆ ಬಿಜೆಪಿಗರು ಗೋಮೂತ್ರ ಹಾಕಿ ಆ ಸ್ಥಳ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದು ಬೇಸರದ ಸಂಗತಿಯಾಗಿದೆ.
–ಪ್ರದೀಪ ಶೆಟ್ಟಿ ನಗರಸಭೆ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.