ADVERTISEMENT

ಕೊಕ್ಕೊದೊಂದಿಗೆ ಥ್ರೋಬಾಲ್‌ನಲ್ಲೂ ‘ಪ್ರಕಾಶ’ಮಾನ

ಮುಂಡಗೋಡ: ಪದವಿ ವಿದ್ಯಾರ್ಥಿಯಿಂದ ಕ್ರೀಡೆಯಲ್ಲಿ ಸಾಧನೆ

ಶಾಂತೇಶ ಬೆನಕನಕೊಪ್ಪ
Published 25 ಜೂನ್ 2019, 19:30 IST
Last Updated 25 ಜೂನ್ 2019, 19:30 IST
ಥ್ರೋಬಾಲ್ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರಕಾಶ ಹರಿಜನ
ಥ್ರೋಬಾಲ್ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರಕಾಶ ಹರಿಜನ   

ಮುಂಡಗೋಡ:ಪಟ್ಟಣದ ಹಳೂರು ನಿವಾಸಿ ಪ್ರಕಾಶ ಹರಿಜನ, ಕೊಕ್ಕೊ ಕ್ರೀಡೆಯ ಜೊತೆಗೆ ಥ್ರೋಬಾಲ್ ಆಟದಲ್ಲಿಯೂ ಸಾಧನೆ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಹರಿಯಾಣ ರಾಜ್ಯದಲ್ಲಿ ನಡೆದ ‘ಫೆಡರೇಶನ್ ಕಪ್’ ಥ್ರೋಬಾಲ್ ಕ್ರೀಡಾಕೂಟದಲ್ಲಿ ರಾಜ್ಯ ತಂಡದ ಪರವಾಗಿ ಪಾಲ್ಗೊಂಡಿದ್ದಾರೆ.

ವಾಣಿಜ್ಯ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಇಲ್ಲಿಯವರೆಗೆ ರಾಷ್ಟ್ರೀಯ ಮಟ್ಟದ ಆರು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಜಿಲ್ಲಾಮಟ್ಟದ ಕೊಕ್ಕೊ ಕ್ರೀಡೆಯಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದಾರೆ. ನಂತರ ಹೈಸ್ಕೂಲ್‌ನಲ್ಲಿ ಕೊಕ್ಕೊ ಜೊತೆಗೆ ಥ್ರೋಬಾಲ್ ಆಟದಲ್ಲಿಯೂ ಸಾಧನೆ ಮಾಡುತ್ತ ಪ್ರಶಸ್ತಿಗಳನ್ನು ಬಾಚಿದ್ದಾರೆ.

‘ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಕೊಕ್ಕೋ ನೆಚ್ಚಿನ ಆಟವಾಗಿತ್ತು. ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದೆ. ಆದರೆ, ಮುಂದೆ ಪ್ರೋತ್ಸಾಹ ಕಡಿಮೆಯಾದಾಗ ಥ್ರೋಬಾಲ್‌ನತ್ತ ಗಮನ ಹರಿಸಿದೆ. ಶಿಕ್ಷಕ ಉಲ್ಲಾಸ ಕೌಠಣಕರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು, ಅಸೋಸಿಯೇಶನ್ ಮೂಲಕ ಹಲವು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರುವೆ’ ಎಂದು ಕ್ರೀಡಾಪಟು ಪ್ರಕಾಶ ಹರಿಜನ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಂತರ ಕಾಲೇಜು ಕೊಕ್ಕೊ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದೆ. ತೆಲಂಗಾಣ ರಾಜ್ಯದಲ್ಲಿ ನಡೆದ 19 ವರ್ಷ ಒಳಗಿನ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ, ದೆಹಲಿಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಕ್ರೀಡಾಕೂಟ, ಮಂಡ್ಯದಲ್ಲಿ ನಡೆದ 19 ವರ್ಷ ಒಳಗಿನ ಕ್ರೀಡಾಕೂಟ, ಚಾಮರಾಜನಗರ, ರಾಮನಗರದಲ್ಲಿ ನಡೆದ ಥ್ರೋಬಾಲ್ ಕ್ರೀಡಾಕೂಟಗಳಲ್ಲಿ ಕರ್ನಾಟಕ ಥ್ರೋಬಾಲ್ ಅಸೋಸಿಯೇಶನ್ ಮೂಲಕ ಪಾಲ್ಗೊಂಡಿರುವೆ. ನಮ್ಮ ತಂಡವು ಚೆನ್ನೈಯಲ್ಲಿ ನಡೆದ ದಕ್ಷಿಣ ವಲಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರನ್ನರ್ಸ್ ಅಪ್ ಸ್ಥಾನ ಗೆದ್ದುಕೊಂಡಿತ್ತು’ ಎಂದು ಹೇಳಿದರು.

‘ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಥ್ರೋಬಾಲ್ ಆಟಕ್ಕೆ ಪ್ರಾಶಸ್ತ್ಯ ನೀಡಿದರೆ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ. ರಾಷ್ಟ್ರೀಯ ತಂಡದಲ್ಲಿ ಆಡಬೇಕೆನ್ನುವ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ’ ಎಂದರು.

‘ಥ್ರೋಬಾಲ್ ನಲ್ಲಿ ಕ್ರೀಡಾಪಟು ಉತ್ತಮ ಸಾಧನೆ ಮಾಡಿದ್ದಾನೆ. ಕ್ರೀಡಾಸಕ್ತರು ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ಜಿಲ್ಲಾ ಥ್ರೋಬಾಲ್‌ ಸಂಸ್ಥೆಯ ಮಾರುತಿ ಓಂಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.