ಕಾರವಾರ: ‘ಸ್ವಭಾಷಾ ಅಭಿಯಾನ ಚಾತುರ್ಮಾಸ್ಯಕ್ಕೆ ಅಥವಾ ಶಿಷ್ಯರಿಗೆ ಸೀಮಿತವಾಗದೇ ನಾಡಿನ ಹೊರಗೂ ಪಸರಿಸಬೇಕು. ನಮ್ಮತನ ಉಳಿಯಬೇಕು’ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯಲ್ಲಿ ಭಾನುವಾರ ಸ್ವಭಾಷಾ ಚಾತುರ್ಮಾಸ್ಯ ವ್ರತ ಸಮಾರೋಪಗೊಳಿಸಿ, ಸೀಮೋಲ್ಲಂಘನ ಬಳಿಕ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
‘ಎಂಥದ್ದೇ ಪರಿಸ್ಥಿತಿಯಲ್ಲೂ ನಮ್ಮತನವನ್ನು ಬಿಡಬಾರದು. ನಮ್ಮತನವನ್ನು ಬಿಟ್ಟು ಬದುಕುವುದು ಸಾವಿಗೆ ಸಮಾನ. ದಿನಕ್ಕೊಂದು ಆಂಗ್ಲಪದ ತ್ಯಜಿಸುವ ಅಭಿಯಾನ ಮುಂದುವರಿಯಬೇಕು’ ಎಂದರು.
‘ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ತಿಳಿದುಕೊಂಡು ಅವರ ಆತ್ಮ ಮೆಚ್ಚುವಂತೆ ಅದನ್ನು ನಿರ್ವಹಿಸಿದರೆ ಅದು ಅತ್ಯುತ್ತಮ ವ್ಯವಸ್ಥೆಯಾಗುತ್ತದೆ. ಹೊಗಳಿಕೆಯಿಂದ ಸತ್ಕಾರ್ಯದ ಪುಣ್ಯ ಕ್ಷಯಿಸುತ್ತದೆ. ನಿರ್ವಿಘ್ನವಾಗಿ ಚಾತುರ್ಮಾಸ್ಯ ಸಂಪನ್ನಗೊಂಡಿದೆ’ ಎಂದು ತಿಳಿಸಿದರು.
ಸೀಮೋಲ್ಲಂಘನ ಸಂದರ್ಭದಲ್ಲಿ ಗಂಗಾವಳಿ ನದಿಗೆ ಬಾಗಿನ ಸಮರ್ಪಿಸಿದ ಅವರು ಗಂಗಾಂಬಿಕಾ ದೇವಸ್ಥಾನದಲ್ಲಿ ಮತ್ತು ಅಶೋಕೆಯ ಮಲ್ಲಿಕಾರ್ಜುನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಚಾತುರ್ಮಾಸ್ಯ ತಂಡದ ಪ್ರಧಾನ ಸಂಚಾಲಕ ಮಂಜುನಾಥ ಸುವರ್ಣಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಹೆಗಡೆ, ಗಣೇಶ್ ಜಿ.ಎಲ್, ಕೆ.ಪಿ.ಎಡಪ್ಪಾಡಿ, ಹರಿಪ್ರಸಾದ್ ಪೆರಿಯಪ್ಪು, ಮಹೇಶ್ ಚಟ್ನಳ್ಳಿ, ಡಾ.ವೈ.ವಿ.ಕೃಷ್ಣಮೂರ್ತಿ, ನಾಗರಾಜ ಭಟ್ ಪೆದಮಲೆ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.