
ಯಲ್ಲಾಪುರ: ಇಲ್ಲಿನ ಕಾಳಮ್ಮ ನಗರದ ರಂಜಿತಾ ಬನ್ಸೊಡೆ ಹತ್ಯೆ ಖಂಡಿಸಿ ಭಾನುವಾರ ಕರೆ ನೀಡಿದ್ದ ಯಲ್ಲಾಪುರ ಬಂದ್‌ಗೆ ಸ್ಪಂದನೆ ವ್ಯಕ್ತವಾಯಿತು. ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಂದ್ ಹಿನ್ನೆಲೆಯಲ್ಲಿ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ವಾರದ ಸಂತೆ ಕೂಡ ನಡೆಯಲಿಲ್ಲ. ಬಂದ್ ವಿಷಯ ತಿಳಿಯದೆ ದೂರದ ಊರುಗಳಿಂದ ತರಕಾರಿ ತಂದಿದ್ದ ವ್ಯಾಪಾರಿಗಳು ವಹಿವಾಟು ನಡೆಸಲಾಗದೆ ಮರಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ‘ದೇಶದ್ರೋಹಿಗಳು ಎಲ್ಲೆಲ್ಲಿ ಅಡಗಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಿದೆ. ಮಾರಕಾಸ್ತ್ರಗಳನ್ನು ಪತ್ತೆ ಹಚ್ಚಿ, ದೇಶದ್ರೋಹಿಗಳನ್ನು ಬಂಧಿಸುವ ಕೆಲಸವಾಗಲಿ. ರಂಜಿತಾ ಹತ್ಯೆ ಘಟನೆ ಸಮಾಜಕ್ಕೆ ಆತಂಕ ಹುಟ್ಟಿಸಿದೆ’ ಎಂದರು.
ಆರೋಗ್ಯ ಭಾರತಿ ಪ್ರಮುಖ ನಾಗೇಶ ಪತ್ತಾರ ಮಾತನಾಡಿ, ‘ಸ್ಥಳೀಯ ಮುಗ್ದ ಅಲ್ಪಸಂಖ್ಯಾತರನ್ನು ಬ್ರೆನ್‌ವಾಶ್ ಮಾಡಿ ಹಿಂದೂ ಯುವತಿಯರಿಗೆ ತೊಂದರೆ ಕೊಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಅನಧಿಕೃತ ಮದರಸಾಗಳನ್ನು ಮುಚ್ಚಬೇಕು. ಪ್ರತ್ಯೇಕ ಉರ್ದು ಶಿಕ್ಷಣ ನಿಲ್ಲಿಸಿ ಎಲ್ಲರಿಗೂ ಸಮಾನ ಶಿಕ್ಷಣ ನೀಡಬೇಕು’ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ‘ರಂಜಿತಾ ಹತ್ಯೆ ಘಟನೆ ಲವ್ ಜಿಹಾದ್ ಪ್ರಕರಣ ಎಂದು ಪರಿಗಣಿಸಿ, ಹತ್ಯೆ ಮಾಡಿದ ಆರೋಪಿಯ ಹಿಂದಿರುವವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದರು.
ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗಜಾನನ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಶ್ಯಾಮಿಲಿ ಪಾಟಣಕರ, ವೆಂಕಟ್ರಮಣ ಬೆಳ್ಳಿ, ಲೋಕೇಶ ಪಾಟಣಕರ, ಅನಂತಮೂರ್ತಿ ಹೆಗಡೆ, ಎಸ್.ಎನ್.ಭಟ್ಟ ಏಕಾನ, ಗೋಪಣ್ಣ, ಉಮೇಶ ಭಾಗ್ವತ, ರಾಮು ನಾಯ್ಕ, ಚಿದಾನಂದ ಹರಿಜನ, ಇತರರು ಪಾಲ್ಗೊಂಡಿದ್ದರು.
ದಲಿತ ಬಾಲಕನಿಗೆ ಉಚಿತ ಶಿಕ್ಷಣ
‘ಹತ್ಯೆಯಾದ ರಂಜಿತಾ ಅವರ ಪುತ್ರನಿಗೆ ಉಚಿತ ಶಿಕ್ಷಣ ಒದಗಿಸುತ್ತೇವೆ’ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬಿಜೆಪಿ ರಾಜ್ಯ ಘಟಕದ ವಕ್ತಾರ ಹರಿಪ್ರಕಾಶ ಕೋಣೆಮನೆ ಭರವಸೆ ನೀಡಿದರು. ‘ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶದ್ರೋಹಿ ಚಟುವಟಿಕೆ ವಿಜೃಂಭಿಸುತ್ತಿದೆ. ದೇಶವಿರೋಧಿ ಶಕ್ತಿಗಳ ಅಟ್ಟಹಾಸ ಮಿತಿಮೀರಿದೆ. ರಾಜ್ಯ ಸರ್ಕಾರ ಪೊಲಿಸರನ್ನು ಬಳಸಿಕೊಂಡು ಹಿಂದೂ ಪರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾನೂನಿನ ಮೂಲಕ ಜಾತಿ ಜಾತಿಯಲ್ಲಿ ಒಡೆಯುವ ಕೆಲಸ ಮಾಡುತ್ತಿದೆ’ ಎಂದರು.
ಆತ್ಮಹತ್ಯೆಗೆ ಶರಣಾದ ಆರೋಪಿ
ರಂಜಿತಾ ಬನ್ಸೊಡೆ ಹತ್ಯೆ ಮಾಡಿದ್ದ ಆರೋಪಿ ರಫೀಕ್ ಯಳ್ಳೂರ ಆತ್ಮಹತ್ಯೆ ಮಾಡಿಕೊಂಡಿದ್ದು ಪಟ್ಟಣದ ಹೊರವಲಯದ ಕಾಜಲವಾಡಾ ಅರಣ್ಯ ಪ್ರದೇಶದಲ್ಲಿ ಭಾನುವಾರ ನಸುಕಿನಜಾವ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದರು. ಶ್ವಾನದಳದ ಸಹಾಯದೊಂದಿಗೆ ಪತ್ತೆ ಕಾರ್ಯ ನಡೆಸುತ್ತಿದ್ದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಸಿಕ್ಕಿದೆ ಎಂದರು. ‘ರಂಜಿತಾ ರಫೀಕ್ ಇಬ್ಬರೂ ಸಹಪಾಠಿಗಳಾಗಿದ್ದರು. ವಿವಾಹಿತೆ ರಂಜಿತಾ ಪತಿಯಿಂದ ವಿಚ್ಛೇದನ ಪಡೆದು ತನ್ನ ಪುತ್ರನೊಂದಿಗೆ ಕಾಳಮ್ಮ ನಗರದ ತಾಯಿ ಮನೆಯಲ್ಲಿ ವಾಸವಿದ್ದಳು. ಪ್ರೀತಿಸುವಂತೆ ರಫೀಕ್ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಇದನ್ನು ನಿರಾಕರಿಸಿದ್ದಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಹತ್ಯೆಗೂ ಕಾರಣವಾಯಿತು’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.