ಕಾರವಾರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆ ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಿರುವ ಪೊಲೀಸ್ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ‘ಕ್ಯೂಆರ್ ಕೋಡ್’ ಅಳವಡಿಸಿ, ಅದರ ಮೂಲಕ ದೂರು ಸ್ವೀಕರಿಸಲು ಮುಂದಾಗಿದೆ.
ಶಾಲೆ, ಕಾಲೇಜುಗಳ ಆವರಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರವಾಸಿ ತಾಣಗಳು ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಮಾದಕ ವಸ್ತುಗಳ ಕುರಿತಂತೆ ಜನರಿಂದ ದೂರು ಸಂಗ್ರಹಿಸಲು ಕ್ಯೂಆರ್ ಕೋಡ್‌ನ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಜಿಲ್ಲೆಯ ಸುಮಾರು 650ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಲಾಖೆ ಹೀಗೆ ಸ್ಟಿಕ್ಕರ್‌ಗಳನ್ನು ಅಂಟಿಸಿದೆ.
‘ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ಪೊಲೀಸ್ ಇಲಾಖೆಯ ವಾಟ್ಸ್ ಆ್ಯಪ್ ಸಂಖ್ಯೆ ತೆರೆದುಕೊಳ್ಳಲಿದೆ. ಜನರು ತಮಗೆ ಕಂಡು ಬರುವ ಮಾದಕ ವಸ್ತು ಸೇವನೆ ಮಾಡುವವರು, ಹಂಚಿಕೆ ಮಾಡುವವರು, ಸಾಗಾಟ ಮಾಡುವವರ ಮಾಹಿತಿಯನ್ನು ಇದರಲ್ಲಿ ಹಂಚಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಆ ಸ್ಥಳದಲ್ಲಿನ ಫೋಟೊ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಹೀಗೆ ದೂರು ನೀಡಿದವರ ಮಾಹಿತಿಯನ್ನು ಇಲಾಖೆ ಗೌಪ್ಯವಾಗಿಡುತ್ತದೆ. ದೂರು ಸಲ್ಲಿಕೆಯಾದವರ ವಿರುದ್ಧ ಪೊಲೀಸ್ ತಂಡ ತಕ್ಷಣವೇ ಕಾರ್ಯಾಚರಣೆ ನಡೆಸುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದರು.
‘ಮಾದಕ ದ್ರವ್ಯದ ಸೇವನೆ, ಸಾಗಾಟ ಮತ್ತು ಮಾರಾಟಕ್ಕೆ ಸಾಧ್ಯವಾದಷ್ಟು ನಿಯಂತ್ರಣ ಹೇರಲಾಗುತ್ತಿದೆ. ಆದರೂ, ದೂರುಗಳನ್ನು ನೀಡಲು ಕೆಲವರು ಹಿಂಜರಿಯುತ್ತಿದ್ದಾರೆ. ಹೊಸ ಮಾದರಿಯ ಕ್ರಮದ ಮೂಲಕ ನಿಖರ ಮಾಹಿತಿ ಮತ್ತು ದೂರು ಪಡೆದು ಮಾದಕ ದ್ರವ್ಯದ ಜಾಲ ಬೇಧಿಸಲು ಮುಂದಾಗುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.